ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ

ಹೊನ್ನಾಳಿ.ಆ.1; ತಾಲೂಕಿನಲ್ಲಿ ಕಳೆದ ವರ್ಷ ಐಎಎಸ್, ತಹಶೀಲ್ದಾರ್, ಡಿವೈಎಸ್‍ಪಿ ಹುದ್ದೆಗಳನ್ನು ಅನೇಕ ಪ್ರತಿಭಾವಂತರು ಅಲಂಕರಿಸಿದ್ದಾರೆ ತಾಲೂಕು ಶಿಕ್ಷಣದ ಗುಣ ಮಟ್ಟವನ್ನು ಕಾಯ್ದುಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠ ಹಾಗೂ ರಾಷ್ಟ್ರೀಯ ಭಾವೈಕ್ಯತಾ ಸಮಿತಿ ವತಿಯಿಂದ ಹಿರೇಕಲ್ಮಠದ ಸಮುದಾಯವಭವನದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶದ ಪದವಿ ಕೊನೆ ವರ್ಷ ಇರುವವರಿಗೆ ಹಾಗೂ ಪದವಿ ಮುಗಿಸಿರುವವರಿಗೆ ಈ ತರಬೇತಿ ಹಮ್ಮಿಕೊಂಡಿದ್ದು ಇದರು ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಶ್ರೀಮಠದಲ್ಲಿ ತರಭೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸಾಧಕರ ಮಾರ್ಗದರ್ಶನ ಪಡೆದು ಇಂದಿನ ಯುವ ಸಮುದಾಯ ಉನ್ನತ ಸ್ಥಾನ ಪಡೆಯಬೇಕು ಎಂದು ಹೇಳಿದರು.
ಒಂದು ಕಾಲದಲ್ಲಿ ಐಎಎಸ್, ಐಪಿಎಸ್ ಪರೀಕ್ಷೆಗಳೆಂದರೆ ಬಹು ಕಠಿಣ ಎಂದು ನಾವು ತಿಳಿದುಕೊಂಡಿದ್ದೇವೆ ಆದರೆ ಈಗ ಗ್ರಾಮೀಣ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಮತ್ತು ಐಪಿಎಸ್ ಪರೀಕ್ಷಗಳನ್ನು ಉತ್ತೀರ್ಣರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಭೇತಿ ಹಮ್ಮಿಕೊಂಡಿರುವುದು ಗ್ರಾಮಾಂತರ ಪ್ರದೇಶದ ಪದವಿದರರಿಗೆ ಒಂದು ಸೌಭಾಗ್ಯವಾಗಿದೆ ತರಭೇತಿಯ ಸದುಪಯೋಗವನ್ನು ಪದವಿದರರು ಪಡೆಯಬೇಕು ಎಂದು ಹೇಳಿದರು.
ಹಳ್ಳಿಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕೀಳರಿಮೆ ಇರುವುದು ಸಹಜವಾದರೂ ಕೀಳರಿಮೆಯಿಂದ ಹೊರ ಬಂದು ಶ್ರಮ ಹಾಕಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಡಾ.ನಾಗವೇಣಿ, ಬಿಇಓ ಜಿ.ಇ.ರಾಜೀವ್, ಸಿಪಿಐ ಜೆ.ರಮೇಶ್, ಪಿಎಸ್‍ಐ ಎನ್.ಸಿ. ಕಾಡದೇವರ, ಪ.ಪಂ ಸದಸ್ಯ ಸುರೇಶ್‍ಹೊಸಕೇರಿ ಉಪಸ್ಥಿತರಿದ್ದರು.

Leave a Comment