ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಬುದ್ಧಿವಂತನಾಗಬೇಕು

ಮೈಸೂರು, ಜ.17: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಬುದ್ಧಿವಂತರಾಗಬೇಕು ಎಂದು ಖ್ಯಾತ ಅರ್ಥಶಾಸ್ತ್ರ ಲೇಖಕ ಡಾ.ಹೆಚ್.ಆರ್.ಕೃಷ್ಣಯ್ಯ ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರಿಂದು ಮಹಾರಾಣಿ ಮಹಿಳಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ವಿಶ್ವವಿದ್ಯಾನಿಲಯ ಮಹಾರಾಣಿ ಮಹಿಳಾ ಕಲಾ ಕಾಲೇಜು ಅರ್ಥಶಾಸ್ತ್ರ ವಿಭಾಗ ಮತ್ತು I.Q.A.C ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಉದ್ಯೋಗವೇನೆಂದು ಪ್ರಶ್ನಿಸಿದ ಅವರು ನೀವು ದಿನಾಲೂ ಕಾಲೇಜಿಗೆ ಬರುತ್ತೀರಿ, ಪಾಠ ಕೇಳುತ್ತೀರಿ, ಮೊಬೈಲ್ ಜೊತೆ ಆಟವಾಡುತ್ತೀರಿ ಅದು ಒಂದು ಉದ್ಯೋಗವೇ ಅಲ್ಲವೇ ಎಂದು ಕೇಳಿದಾಗ ಕೆಲವರಿಂದ ಹೌದೆಂಬ ಉತ್ತರ ಬಂತು. ಅದನ್ನು ಸ್ಪಷ್ಟವಾಗಿ ಅಲ್ಲಗಳೆದ ಅವರು ಉದ್ಯೋಗವೆಂದರೆ ನಮ್ಮನ್ನು ನಾವು ಸೇವೆಯಲ್ಲಿ ತೊಡಗಿಸಿಕೊಂಡು ಆದಾಯ ಪಡೆಯುವುದು. ಆಮೂಲಕ ಜೀವನೋಪಾಯಕ್ಕೆ ಮಾರ್ಗ ಕಂಡುಕೊಳ್ಳುವುದು ಎಂದರು. ಕೆಲವರು ಅರ್ಥಶಾಸ್ತ್ರ ಬಹಳ ಒಳ್ಳೆಯ ವಿಜ್ಞಾನ ಎನ್ನುತ್ತಾರೆ. ಯಾವ ವಿಷಯವೂ ಕಳಪೆಯಲ್ಲ, ಯಾವ ವಿಷಯವೂ ಮೇಲಲ್ಲ. ಎಲ್ಲ ವಿಷಯಕ್ಕೂ ತನ್ನದೇ ಆದ ಅಂತಃಸತ್ವ, ಗುಣ, ವೈಶಿಷ್ಟ್ಯ, ಲಕ್ಷಣ ಇದ್ದೇ ಇರಲಿದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಒಂದು ಕಾಲದಲ್ಲಿ ವ್ಯಾಪ್ತಿಯಲ್ಲಿದ್ದ ವಿಷಯ ಇನ್ನೊಂದು ಕಾಲದಲ್ಲಿ ಕಡಿಮೆ ಇರಬಹುದು ಎಂದು ತಿಳಿಸಿದರು. ಅರ್ಥಶಾಸ್ತ್ರಜ್ಞರೆಂದರೆ ಯಾರು? ಅರ್ಥವಾಗುವಂತೆ ಪಾಠ ಮಾಡುವವರು ಅರ್ಥಶಾಸ್ತ್ರಜ್ಞರು, ತಿಳಿಯದಂತೆ ಪಾಠ ಮಾಡಿದರೆ ಅನರ್ಥಶಾಸ್ತ್ರಜ್ಞರು ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು ಪ್ರತಿದಿನ ನಾವು ತಿಳಿದುಕೊಳ್ಳತಕ್ಕ ವಿಷಯಗಳು ನಮ್ಮ ಜೀವನಕ್ಕೆ ಸಮಬಂಧಿಸಿದ್ದೇ ಆಗಿರಲಿದೆ. ದಿನನಿತ್ಯದ ಕಲಿಕೆಯನ್ನು ಕಲಿಯಬೇಕಾದರೆ ವೈಜ್ಞಾನಿಕವಾಗಿ ಯಾವುದೇ ವಿಷಯವನ್ನು ಬಳಸಿಕೊಂಡು ಸಿದ್ದಾಂತ ರೂಪಿಸಿಕೊಳ್ಳಬೇಕು. ಸರ್ಕಾರ, ಖಾಸಗಿ ವಲಯ, ಸಹಕಾರಿ ವಲಯಗಳಲ್ಲಿ ಉದ್ಯೋಗವಿರುತ್ತದೆ. ಆರ್ಥಿಕ ಚಟುವಟಿಕೆ ನಿರ್ವಹಣೆ ಮಾಡುವಾಗ ಹಣ ಬೇಕು. ಹಣ ಬಂಡವಾಳ ತೊಡಗಿಸಿ ಶ್ರಮ ಹಾಕುತ್ತ ಉತ್ಪನ್ನ ಬಳಸಿಕೊಳ್ಳಬೇಕು. ಅದನ್ನು ಯಾವ ರೀತಿ ಮಾಡುತ್ತೇವೆ ಸರ್ಕಾರದ ಮಟ್ಟದಲ್ಲಿ ಮಾಡಿದರೆ, ಸರ್ಕಾರಕ್ಕೆ ಸಂಬಂಧಿಸಿದ್ದು, ಖಾಸಗಿಯಾಗಿ ಮಾಡಿದರೆ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ್ದು ಎಮದು ವಿವರಿಸಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಬುದ್ಧಿವಂತನಾಗಬೇಕು, ಬುದ್ಧಿವಂತ ಅಂದರೆ 100ಕ್ಕೆ 100ಅಂಕ ತೆಗೆದುಕೊಳ್ಳುವುದಲ್ಲ. ಬದಲಿಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಪ್ರಕಾಶ್ ಸಿ.ಹೆಚ್, ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎನ್.ರೂಪ್, ಐಕ್ಯೂಐಸಿ ಸಂಯೋಜಕಿ ಡಾ.ರತ್ನ.ಎನ್, ಸಹಪ್ರಾಧ್ಯಾಪಕರುಗಳಾದ ಡಾ.ರಶ್ಮಿ ಚನ್ನಯ್ಯ, ಸಹಪ್ರಾಧ್ಯಾಪಕ ಡಾ.ನೇ.ತಿ.ಸೊಮಶೇಖರ್, ಡಾ.ಶಶಿಕಲ, ಡಾ.ಎನ್.ಟಿ.ಕೃಷ್ಣಮೂರ್ತಿ, ಡಾ.ಪ್ರಮೀಳಾ ಹೆಚ್.ಎನ್ ಉಪಸ್ಥಿತರಿದ್ದರು.

Leave a Comment