ಸ್ನೇಹ ಸಂತೃಪ್ತಿ ಸಂತೋಷಗಳೇ ಜೀವನದ ನಿಜವಾದ ಸಂಪತ್ತು

ದಾವಣಗೆರೆ.ಆ.9; ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಯಾವ ರೀತಿ ಬಾಳಿದನೆಂಬುದು ಮುಖ್ಯ. ಸ್ನೇಹ ಸಂತೃಪ್ತಿ ಸಂತೋಷಗಳೇ ಜೀವನದ ನಿಜವಾದ ಸಂಪತ್ತೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಅವರು ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 4ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬಾಹ್ಯ ಸೌಂದರ್ಯ ನಾಗರೀಕತೆಯ ಸಂಕೇತ. ಆಂತರಿಕ ಸೌಂದರ್ಯ ಸಂಸ್ಕೃತಿಯ ಸಂಕೇತ. ಹುಟ್ಟು ಸಾವು ನಿನ್ನ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ನಿನ್ನ ಕೈಯಲ್ಲಿದೆ ಎಂಬುದನ್ನರಿತು ಬಾಳಿದರೆ ಜೀವನ ಸಾರ್ಥಕಗೊಳ್ಳುತ್ತದೆ. ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಗೆ ಅದ್ಭುತ ಕಾರ್ಯವನ್ನು ಸಾಧಿಸಿದರೆ ಸಂಶಯ ಸರ್ವ ನಾಶಕ್ಕೆ ಕಾರಣವಾಗುತ್ತದೆ. ಮನುಷ್ಯ ದೇಹ ಸುಂದರವಾದ ಅಲೌಕಿಕ ದೇವ ಮಂದಿರ. ಸುಂದರ ಕಾಲುಗಳೇ ಕಂಬಗಳು. ತಲೆಯೊಳಗಿರುವ ಜ್ಞಾನದ ಬೆಳಕೇ ದೇವಾಲಯದ ಚಿನ್ನದ ಕಳಸ. ಕಲ್ಲು ಮಣ್ಣುಗಳಿಂದ ಕಟ್ಟಿದ ಗುಡಿ ದೇವಾಲಯಗಳು ಬೀಳಬಹುದು. ಆದರೆ ಜ್ಞಾನ ಮಂದಿರದ ಹೊನ್ನ ಕಳಸ ಎಂದೂ ಬೀಳುವುದಿಲ್ಲ. ಮಹಾತ್ಮರು ಆಸ್ತಿ ಗಳಿಸದೇ ಚಿರಶಾಂತಿ ಬದುಕಿನಲ್ಲಿ ಪಡೆದರು. ಮನುಷ್ಯ ಧನ ಕನಕ ಗಳಿಸಿ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ನೀರು ಗಾಳಿ ಆಹಾರ ಕೆಟ್ಟಿಲ್ಲ. ಮನುಷ್ಯನ ಮನಸ್ಸುಗಳು ಕೆಡುತ್ತಿವೆ. ಸ್ವಸ್ಥ ಮನಸ್ಸಿಗೆ ಅಧ್ಯಾತ್ಮವೊಂದೇ ದಿವ್ಯೌಷಧ. ವೀರಶೈವ ಧರ್ಮದಲ್ಲಿ ಬದುಕಿನ ಸಾರ್ಥಕತೆಗೆ ಅಮೂಲ್ಯ ವಿಚಾರ ಧಾರೆಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಅನೇಕ ಶರಣರು ಕೊಟ್ಟು ಹೋದುದನ್ನು ಮರೆಯಬಾರದೆಂದರು. ಡಾ. ಮುರುಘರಾಜೇಂದ್ರ ಕೌಜಲಗಿ ಅವರಿಗೆ “ಆರೋಗ್ಯ ರಕ್ಷಕ” ಎಂಬ ಪ್ರಶಸ್ತಿಯನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಮಾಜಿ ಸಚಿವ ಶಾಸಕ ಎಸ್.ಎ. ರವೀದ್ರನಾಥ, ಯಶವಂತರಾವ್ ಜಾಧವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಸಂಸ್ಕøತಿಯ ಬಗೆಗೆ ಮಾತನಾಡಿದರು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಗದುಗಿನ ವೀರೇಶ ಕಿತ್ತೂರು ಅವರಿಂದ ಸಂಗೀತ ಸೇವೆ ಜರುಗಿತು. ಶಿವನಗೌಡ ಪಾಟೀಲ ಸ್ವಾಗತಿಸಿದರು. ವೀರಣ್ಣ ಶೆಟ್ಟರ್ ನಿರೂಪಿಸಿದರು.

Leave a Comment