ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವು;ಡಿ.ಯಶೋಧರ

ಚಿತ್ರದುರ್ಗ: ಜೆಡಿಎಸ್.ಅಸ್ತಿತ್ವದ ಬೇರುಗಳು ಇನ್ನು ಗಟ್ಟಿಯಾಗಿದೆ ಎನ್ನುವುದನ್ನು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಬೀತುಪಡಿಸುವಂತೆ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿರುವ ಜೆಡಿಎಸ್.ಕಚೇರಿಯಲ್ಲಿ ಕರೆಯಲಾಗಿದ್ದ ಚಿತ್ರದುರ್ಗ ನಗರಸಭೆ ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ತಿಂಗಳ 29 ರಂದು ನಡೆಯುವ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್.ಪಕ್ಷವನ್ನು ಸೋಲಿಸಬೇಕೆಂದು ಬಿಜೆಪಿ.ಹೂಡುತ್ತಿರುವ ಷಡ್ಯಂತ್ರವನ್ನು ಹುಸಿಗೊಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು.ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿರುವುದನ್ನು ಸವಾಲಾಗಿ ಸ್ವೀಕರಿಸಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ಜೊತೆ ದೂರವಾಣಿಯಲ್ಲಿ ಮಾತನಾಡಿ ಪೂರ್ವಭಾವಿ ಸಭೆಯನ್ನು ನಿಗಧಿಪಡಿಸಲಾಯಿತು. ಅದರಂತೆ ಶ್ರಾವಣ ಮಾಸ ಆರಂಭದ ಶುಭದಿನದ ಈ ಸಭೆಗೆ ಅನಿವಾರ್ಯ ಕಾರಣಗಳಿಂದ ವೀರೇಂದ್ರಪಪ್ಪಿರವರು ಆಗಮಿಸಿಲ್ಲ. ಅದಕ್ಕೆ ಯಾರು ಅಸಮಾಧಾನಪಟ್ಟುಕೊಳ್ಳುವುದು ಬೇಡ. ನಗರದ 35 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆ ಮುಗಿಯುವತನಕ ಜೊತೆಯಲ್ಲಿರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದ್ಕಕಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಿ ಎಂದರು.
ಸ್ಪರ್ಧಾಕಾಂಕ್ಷಿಗಳು ಟಿಕೇಟ್‍ಗೆ ಅರ್ಜಿ ಸಲ್ಲಿಸದಿದ್ದರೆ ಈಗಲೂ ಸಲ್ಲಿಸಬಹುದು. ಜೆಡಿಎಸ್.ಹಳೆ ಕಚೇರಿ ನವೀಕರಣಗೊಳ್ಳುತ್ತಿದೆ ಅದನ್ನು ಉದ್ಘಾಟಿಸಲಾಗುವುದು. ಚಳ್ಳಕೆರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್.ಕಾಂಗ್ರೆಸ್ ಪೈಪೋಟಿಯಿದೆ. ಹೊಸದುರ್ಗದಲ್ಲಿಯೂ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳಬೇಕು. ನಗರದ 35 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಗುರುತಿಸುವುದು ಸುಲಭವಲ್ಲ. ರಾಷ್ಟ್ರೀಯ ಪಕ್ಷಗಳಿಗೂ ಅಭ್ಯರ್ಥಿಗಳ ಕೊರತೆಯಾಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಸಹಿಸದ ಕೆಲವು ವಿರೋಧಿಗಳು ಅಪಪ್ರಚಾರ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಹಾಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿರೋಧಿಗಳಿಗೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸುವಂತೆ ಸೂಚಿಸಿದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಆರು ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಾನು ಮಾಡಿರುವ ಎಲ್ಲಾ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಳೆದ ಹದಿನೈದು ವರ್ಷಗಳಿಂದಲೂ ನಗರಸಭೆ ಆಡಳಿತ ಜೆಡಿಎಸ್.ಕೈಯಲ್ಲಿರುವುದರಿಂದ ನಗರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ ಎಂದು ಜನರನ್ನು ದಿಕ್ಕುತಪ್ಪಿಸುವ ಮಾತುಗಳನ್ನಾಡುತ್ತಿದ್ದಾರೆ. ಯಾರು ಅವರ ಅಪವಾಧಗಳಿಗೆ ಸೊಪ್ಪು ಹಾಕಬಾರದು ಎಂದು ಮನವಿ ಮಾಡಿದರು.
ಶಾಸಕರ ಅಭಿವೃದ್ದಿ ಕೆಲಸಗಳಿಗೆ ನಗರಸಭೆ ಎಲ್ಲಿ ಅಡ್ಡಿಯಾಗಿದೆ. ಹತ್ತು ವರ್ಷಗಳ ಕಾಲ ರಾಜ್ಯದಲ್ಲಿ ಜೆಡಿಎಸ್.ಅಧಿಕಾರ ಕಳೆದುಕೊಂಡಾಗಲೆ ತಕ್ಕಮಟ್ಟಿಗೆ ನಗರವನ್ನು ಅಭಿವೃದ್ದಿಪಡಿಸಲಾಗಿದೆ. ಮೂವತ್ತು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಶಾಸಕರಾಗಿದ್ದುಕೊಂಡು ಮಾಡಿದ ಘನ ಕಾರ್ಯವೇನು ಎಂದು ನಗರಸಭೆ ಮೇಲೆ ಹೊರಿಸಿರುವ ಆಪಾದನೆಗೆ ತಿರುಗೇಟು ನೀಡಿದರು.
ನಿವೇಶನಗಳನ್ನು ಭೂಪರಿವರ್ತನೆಯಾಗಿ ಮಾಡಿ ಸರ್ಕಾರದ ಹಣವನ್ನು ಸ್ವಂತ ಲೇಔಟ್‍ಗಳಲ್ಲಿ ರಸ್ತೆ, ಬೀದಿದೀಪ, ನೀರು, ಚರಂಡಿ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿರುವ ಸ್ಥಳೀಯ ಶಾಸಕರ ಅಕ್ರಮಗಳಿಗೆ ನಗರಸಭೆ ಅಡ್ಡಿಯಾಗಿರುವುದು ನಿಜ. ಇಲ್ಲದಿದ್ದರೆ ನಗರದಲ್ಲಿರುವ ಉದ್ಯಾನವನಗಳೆಲ್ಲಾ ಇಷ್ಟೊತ್ತಿಗೆ ಯಾವಾಗಲೋ ನಿವೇಶನಗಳಾಗಿಬಿಡುತ್ತಿದ್ದವು. ಹದಿನೈದು ವರ್ಷಗಳಿಂದಲೂ ನಗರಸಭೆ ಅಧಿಕಾರ ಜೆಡಿಎಸ್.ಕೈಯಲ್ಲಿರುವುದರಿಂದಲೇ ಇನ್ನು ನಗರದಲ್ಲಿರುವ ಪಾರ್ಕ್‍ಗಳು ಉಳಿದುಕೊಂಡಿವೆ ಎಂದರು.
ಮೂರು ಇಂಚು ಪೈಪ್ ಅಕ್ರಮ ಸಂಪರ್ಕದಿಂದ ನಗರಸಭೆ ನೀರನ್ನು ಸ್ವಂತ ಮಿಲ್‍ಗೆ ಬಳಸಿಕೊಳ್ಳುತ್ತಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭೂಗಳ್ಳ, ನೀರುಗಳ್ಳ ಎಂದು ಬಹಿರಂಗವಾಗಿ ನಾನು ಹೇಳುತ್ತಿದ್ದೇನೆ. ಆದರೂ ನನ್ನ ವಿರುದ್ದ ಮಾನನಷ್ಟ ಹೂಡುವ ಧೈರ್ಯ ಅವರಿಗಾಗಲಿ ಅವರ ಬೆಂಬಲಿಗರಿಗಾಗಲಿ ಇಲ್ಲ ಎಂದು ಲೇವಡಿ ಮಾಡಿದರು.
ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಅಧಿಕಾರವನ್ನು ನಮ್ಮ ಕೈಗೆ ಕೊಡಿ ನಗರದ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ಜೆಡಿಎಸ್.ತಾಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಹೆಚ್.ತಿಮ್ಮಣ್ಣ, ಶೇಖರಪ್ಪ, ಎಂ.ಕೆ.ಹಟ್ಟಿ ವೀರಣ್ಣ, ಜಿಲ್ಲಾ ಜೆಡಿಎಸ್.ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಸಿ.ಟಿ.ರಾಜೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್‍ಜೋಗಿ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

 

Leave a Comment