ಸ್ತ್ರೀಯರಿಗೆ ಸೌಂದರ್ಯ ದೇವರು ಕೊಟ್ಟ ವರ

ತುಮಕೂರು, ಸೆ. ೧೩- ಹೆಣ್ಣಿಗೆ ಸೌಂದರ್ಯ ದೇವರು ನೀಡಿರುವ ವರ. ಅದನ್ನು ವೃದ್ದಿಪಡಿಸಿಕೊಳ್ಳಲು ನಮ್ಮ ಮಹಿಳೆಯರು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕಾಸ್ಮೆಟಿಕ್ಸ್ ಮೊರೆ ಹೋಗುವುದಕ್ಕಿಂತ ಹೆಚ್ಚಾಗಿ ಧನಾತ್ಮಾಕವಾಗಿ ಚಿಂತಿಸಿದರೆ ತನ್ನಷ್ಟಕ್ಕೆ ತಾನೇ ಸೌಂದರ್ಯ ವೃದ್ಧಿಯಾಗಿ ಹೆಣ್ಣು ಆಕರ್ಷಕವಾಗಿ ಕಾಣುತ್ತಾಳೆ. ತಮ್ಮನ್ನು ತಾವು ಸ್ವಯಂ ರೂಪಿಸಿಕೊಳ್ಳುವುದು ಹೆಣ್ಣು ಮತ್ತು ಗಂಡು ಇಬ್ಬರಿಗೂ ಅವಶ್ಯಕ ಎಂದು ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮತ್ತು ಮಿಸೆಸ್ ಪ್ರೈಡ್ ಆಫ್ ಕರ್ನಾಟಕ-2017 ಪ್ರಶಸ್ತಿ ವಿಜೇತೆ ಸಹನಾ ದೊಡ್ಮನೆ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಏರ್ಪಡಿಸಿದ್ದ “ಸೆಲ್ಫ್ ಗ್ರೂಮಿಂಗ್” ಎಂಬ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖ್ಯಾತ ಸೌಂದರ್ಯ ತಜ್ಞೆ ಹಾಗೂ ಕಾರ್ಯಗಾರದ ತರಬೇತುದಾರೆ ಅಂಕಿತ ಬಗರಿ ಚಂದರ್ ಮಾತನಾಡಿ, ಪ್ರತಿಯೊಬ್ಬರಿಗೂ ತಾನು ಆಕರ್ಷಕವಾಗಿ ಕಾಣಬೇಕು ಎಂಬ ತುಡಿತ ಇರುವುದು ಸಹಜ. ಸೌಂದರ್ಯದಲ್ಲಷ್ಟೇ ಅಲ್ಲದೆ ವ್ಯಕ್ತಿತ್ವದಲ್ಲಿ ಅಂತಹ ವೈಶಿಷ್ಟ ಪೂರ್ಣವಾದ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಜತೆಗೆ ದಿನವೂ ಘನಾತ್ಮಕ ಮನಸ್ಥಿತಿಯೊಂದಿಗೆ ದಿನವನ್ನು ಪ್ರಾರಂಭ ಮಾಡಬೇಕು. ಅಲಂಕಾರ, ಧಿರಿಸು ಮತ್ತು ನಮ್ಮ ವ್ಯಕ್ತಿತ್ವ ಮೂರನ್ನು ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅದಕ್ಕೋಸ್ಕರ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಎಚ್ಚರ ವಹಿಸಿಕೊಳ್ಳಬೇಕು. ಹಾಗೆ ಅಲಂಕಾರಿಕ ಪ್ರಸಾದನಗಳು ಅವಶ್ಯಕವಾಗಿರುತ್ತವೆ ಎಂದರು.

ನಮ್ಮ ಪೂರ್ವ ಕಾಲದ ಮಹಿಳೆಯರು ತಮ್ಮ ಅಂದವನ್ನು ದ್ವಿಗುಣಪಡಿಸಿಕೊಳ್ಳಲು ತಮ್ಮದೇ ಆದ ವಿಧಾನವನ್ನು ಕಂಡುಕೊಂಡಿದ್ದರು. ಅದು ಸ್ವಯಂ ಕಲೆಯಾಗಿತ್ತು. ಇಂದು ಅದು ನಶಿಸಿ ಹೋಗಿ ಎಲ್ಲರೂ ಬ್ಯೂಟಿ ಪಾರ್ಲರ್‌ಗಳ ಮೊರೆ ಹೋಗುತ್ತಿರುವುದಕ್ಕೆ ವಿಷಾದಿಸಿದರು. ಎರಡು ಗೋಷ್ಠಿಗಳಲ್ಲಿ ಸೌಂದರ್ಯದ ಜತೆಗೆ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳುವ ಕಲೆಯ ಬಗ್ಗೆ ಆಪ್ತ ಸಮಾಲೋಚನೆ  ಹಾಗೂ ಚಿತ್ರ ಸಮೇತ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಡಿ.ಎನ್. ಯೋಗೀಶ್ವರಪ್ಪ ವಹಿಸಿದ್ದರು. ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘದ ಉಪಾಧ್ಯಕ್ಷೆ ಮುಕ್ತ ಬಸವರಾಜು, ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿನಿಯರು ಹಾಗೂ ಕಾರ್ಯಕಾರಿ ಸಮಿತಿ ಕೋಶಾಧ್ಯಕ್ಷೆ ಪೂಜಾ.ಡಿ.  ಸದಸ್ಯರಾದ ನಯನ, ಲಾವಣ್ಯ, ಆರ್.ಎಸ್.ವಿಜಯಲತಾ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿನಿಯರ ಸಂಘದ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಪಾವನ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಸಿ.ಎಸ್.ಶ್ವೇತ ಕಾರ್ಯಕ್ರಮ ನಿರೂಪಿಸಿದರು.

Leave a Comment