ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆ

ಸ್ತನ ಕ್ಯಾನ್ಸರ್ ಜಗತ್ತಿನಾದ್ಯಂತ ಮಹಿಳೆಯರನ್ನು ಕಾಡುವ ಅತಿ ದೊಡ್ಡ ಕಾಯಿಲೆಯಾಗಿದೆ. ಭಾರತದಲ್ಲಂತೂ ಇದರ ಪಿಡುಗು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ನಿರ್ಲಕ್ಷ್ಯ ಮನೋಭಾವ. ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಸಾಕಷ್ಟು ಮಟ್ಟಿಗೆ ಇದರ ಕಪಿಮುಷ್ಠಿಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ಇದರ ಬಗೆಗೆ ನಿರ್ಲಕ್ಷ್ಯ ಮಾಡಿದಷ್ಟೂ ಅದು ಅಕ್ಕಪಕ್ಕ ಪಸರಿಸುತ್ತಾ ಹೋಗುತ್ತದೆ.

ಏನೇನು ಲಕ್ಷಣಗಳು ಕಂಡುಬರಬಹುದು?

* ಸ್ತನ ಭಾಗದಲ್ಲಿ ಗೆಡ್ಡೆ ಅಥವಾ ಅದುಮಿದಾಗ ಗಟ್ಟಿಯಾಗಿರುವ ಅನುಭೂತಿ ಉಂಟು ಮಾಡಬಹುದು.
* ಕಂಕುಳು ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.
* ಸ್ತನದ ತೊಟ್ಟುಗಳು ಮುರುಟಿಕೊಂಡಂತೆ ಕಾಣಿಸಬಹುದು.
* ಸ್ತನದ ಗಾತ್ರ, ಬಣ್ಣದಲ್ಲಿ ವ್ಯತ್ಯಾಸ ಗೋಚರಿಸಬಹುದು.
* ಸ್ತನದ ತೊಟ್ಟಿನಿಂದ ರಕ್ತ ಒಸರಿಸಬಹುದು.
* ಸ್ತನದ ಸುತ್ತಮುತ್ತಲಿನ ಭಾಗದಲ್ಲಿ ಮಾಮೂಲಿಗಿಂತ ಬೇರೆ ರೀತಿಯ ಗೆಡ್ಡೆಗಳು ಅಥವಾ ಗಾಯದ ರೀತಿಯಲ್ಲಿ ಗುರುತುಗಳು ಕಂಡುಬರಬಹುದು.
ಈ ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ವೈದ್ಯರ ಬಳಿ ಹೋಗಿ ಪರಾಮರ್ಶೆ ಮಾಡಿ, ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ನ ಪ್ರಕರಣಗಳು ಮುಂಚೆ 45-50ರ ಆಸುಪಾಸಿನ ವಯೋಮಾನದವರಲ್ಲಿ ಗೋಚರಿಸುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ 30ರ ಆಸುಪಾಸಿನ ವಯೋಮಾನದ ಮಹಿಳೆಯರಲ್ಲಿ ಹೆಚ್ಚಿವೆ.

ಕುಟುಂಬ ಹಿನ್ನೆಲೆ

ಕುಟುಂಬದಲ್ಲಿ ತಾಯಿ ಹಾಗೂ ಸೋದರರಿಗೆ ಈ ಸಮಸ್ಯೆ ಇದ್ದರೆ ಅದು ಅವಳಿಗೂ ಉಂಟಾಗುವ ಸಾಧ್ಯತೆ ಹೆಚ್ಚು.

ಸ್ತನ ಕ್ಯಾನ್ಸರ್ ಉಂಟಾಗಲು ಏನು ಕಾರಣ

ಸ್ತನ ಕ್ಯಾನ್ಸರ್ ಎನ್ನುವುದು ಒಮ್ಮೆಲೆ ಪ್ರತ್ಯಕ್ಷವಾಗದು. ಅದು ಕ್ರಮೇಣ ಬೆಳವಣಿಗೆಯಾಗುತ್ತಾ ಹೇಗುವ ಸಮಸ್ಯೆ. ನಮ್ಮ ದೇಹದ ಆರೋಗ್ಯವನ್ನು ಸುವ್ಯವಸ್ಥಿತ ರೀತಿಯಲ್ಲಿ ಕಾಪಾಡಲು ಹೆಚ್ಚು ಹೆಚ್ಚು ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಈ ಜೀವಕೋಶಗಳು ಹಾನಿಗೊಳಗಾದಾಗ ಅವು ಸತ್ತು ಬೇರೆ ಜೀವಕೋಶಗಳು ಹುಟ್ಟುತ್ತವೆ. ಈ ಹುಟ್ಟು ಮತ್ತು ಸಾವಿನ ಪ್ರಕ್ರಿಯೆ ಅಂದರೆ ಕೋಶ ವಿಭಜನೆ ನಿಯಂತ್ರಣದಲ್ಲಿರುತ್ತದೆ. ಆದರೆ ಕೆಲ ಕಾರಣಗಳಿಂದಾಗಿ ಈ ಸಹಜ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಜೀವಕೋಶಗಳು ಹೇಗೇಗೋ ವಿಭಜನೆಗೊಳ್ಳಲು ಆರಂಭವಾಗುತ್ತವೆ. ಇದರ ಪರಿಣಾಮವೆಂಬಂತೆ ಈ ಕೋಶಗಳು ಅತಿಯಾಗಿ ಬೆಳೆದು ಕ್ಯಾನ್ಸರ್ ಕೋಶಗಳಾಗುತ್ತವೆ. ಬಳಿಕ ಗಂಟುಗಳಾಗುತ್ತವೆ. ಹಾಗೆಯೇ ಅವು ಇನ್ನೊಂದು ಅಂಗ ಸೇರಿ ಅದೇ ಪ್ರಕ್ರಿಯೆ ಮುಂದುವರೆಸುತ್ತದೆ.

ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಅಂಶವೆಂದರೆ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಬೊಜ್ಜು, ತಪ್ಪು ಆಹಾರ ಸೇವನೆ, ರಾಸಾಯನಿಕ ವಸ್ತುಗಳ ಸಂಪರ್ಕ, ಕಲುಷಿತ ವಾತಾವರಣ ಹೀಗೆ ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು. ಆದರೆ, ನಿಖರವಾಗಿ ಇಂತದೇ ಕಾರಣದಿಂದ ಸ್ತನಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಲಾಗದು. ಅತಿಯಾಗಿ ಗರ್ಭನಿರೋಧಕಗಳ ಸೇವನೆ, ಮಗುವಿಗೆ ಸ್ತನ್ಯಪಾನ ಮಾಡಿಸದಿರುವುದು, ಚಿಕ್ಕ ವಯಸ್ಸಿನಲ್ಲೇ ಎದೆ ಭಾಗದಲ್ಲಿ ರೇಡಿಯೊ ಥೆರಪಿ, ಹಾರ್ಮೋನ್ ಅಂಶಗಳು, ಮಕ್ಕಳಾಗದೇ ಇರುವುದು, ತಡವಾಗಿ ಮಕ್ಕಳನ್ನು ಪಡೆಯುವುದು ಇವೂ ಕೂಡ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು.

ಸ್ತನದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ, ಲಕ್ಷಣಗಳು ಗೋಚರಿಸಿದರೆ ವೈದ್ಯರ ಬಳಿ ಹೋಗುವುದರಿಂದ ಶೀಘ್ರ ರೋಗ ಪತ್ತೆಗೆ ಅನುಕೂಲವಾಗುತ್ತದೆ. ರೋಗವನ್ನು ಬೇಗ ಗುರುತಿಸಿದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ. ಅದರ ಫಲಿತಾಂಶವು ಆಶಾದಾಯಕವಾಗಿರುತ್ತದೆ.

ಸ್ವಯಂ ಪರೀಕ್ಷೆ

ಸ್ತನ ಕ್ಯಾನ್ಸರಿನ ಬಗ್ಗೆ ಅರಿವು ಮೂಡಿಸಿಕೊಂಡು ತಾವೇ ಸ್ವತಃ ಪರೀಕ್ಷೆ ಮಾಡಿಕೊಳ್ಳಬೇಕು. ವ್ಯತ್ಯಾಸಗಳನ್ನು ಬಹುಬೇಗ ಗುರುತಿಸಿಕೊಳ್ಳಬಹುದು.
ಮ್ಯಾಮೊಗ್ರಾಮ್

ಸ್ತನದಲ್ಲಿ ಏನಾದರೂ ಅಸಹಜತೆ ಇದೆಯೇ ಎಂದು ಪತ್ತೆಹಚ್ಚಲು ಮ್ಯಾಮೋಗ್ರಾಮ್ ಅಥವಾ ಮ್ಯಾಮೊಗ್ರಫಿ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಇದು ಕೂಡ ಒಂದು ರೀತಿಯ ಎಕ್ಸ್‌ರೇ ವಿಧಾನ. ವಿಶೇಷವಾಗಿ ರೂಪಿಸಲಾದ ಕಂಪ್ರೆಷನ್ ಪ್ಲೇಟ್ ಜತೆಗೆ ಸ್ತನಗಳ ಮೇಲೆ ಒತ್ತಡ ಕೊಡಲಾಗುತ್ತದೆ. ಒಂದು ಸಲ ಮೇಲಿನಿಂದ ಕೆಳಭಾಗಕ್ಕೆ ಮತ್ತೊಂದು ಸಲ ಓರೆಯಾಗಿ ಹೊರಭಾಗದಿಂದ ಒಳಗೆ ಹೀಗೆ ಎರಡು ಸಲ ಪರೀಕ್ಷೆ ನಡೆಸಲಾಗುತ್ತದೆ. ಸ್ತನದ ಸರಿಯಾದ ಸ್ಪಷ್ಟ ಚಿತ್ರಣ ತೆಗೆದುಕೊಳ್ಳಲು ಹೀಗೆ ಮಾಡಲಾಗುತ್ತದೆ.

ಸೋನೋಗ್ರಾಮ್ ಅಥವಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್

ಇದು ಮ್ಯಾಮೊಗ್ರಫಿಯ ಮುಂದುವರಿದ ಅಥವಾ ಪೂರಕ ಪರೀಕ್ಷಾ ವಿಧಾನ ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಅಸಹಜತೆ ಇರುವ ಸಂದೇಹ ಕಂಡುಬಂದಾಗ ಸ್ತನದಲ್ಲಿ ಗೆಡ್ಡೆ ಅಥವಾ ಸಿಸ್ಟ್ ಅಂದರೆ, ದ್ರವ ತುಂಬಿದ ಕೋಶಗಳು ಏನಾದರೂ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇದನ್ನು ಮಾಡಲಾಗುತ್ತದೆ.

ನೀಡಲ್ ಬಯಾಪ್ಸಿ

ಸೋನೋಗ್ರಫಿಯಲ್ಲಿ ಕ್ಯಾನ್ಸರ್ ಇರುವ ಸಾಧ್ಯತೆ ಕಂಡುಬಂದಾಗ ಅಂಗಾಂಶ ಪರೀಕ್ಷೆ (ನೀಡಲ್ ಬಯಾಪ್ಸಿ) ಮಾಡಲಾಗುತ್ತದೆ.
ಕ್ಯಾನ್ಸರ್ ಕಾರಕ ಟಿಷ್ಯೂ ಅಥವಾ ಗೆಡ್ಡೆಯ ಭಾಗದಿಂದ ಒಂದು ಸಣ್ಣ ಮಾದರಿಯನ್ನು ಸೂಜಿಯ ಸಹಾಯದಿಂದ ಹೊರಗೆ ತೆಗೆಯಲಾಗುತ್ತದೆ. ಬಳಿಕ ಪೆಥೋಲಾಜಿಸ್ಟ್‌ಗಳು ಅದನ್ನು ಪರೀಕ್ಷಿಸಿ ಕ್ಯಾನ್ಸರ್ ಇದ್ದರೆ ಅದನ್ನು ದೃಢಪಡಿಸುತ್ತಾರೆ.

ಶಸ್ತ್ರಚಿಕಿತ್ಸೆ

ಸ್ತನದ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆ ಮಾಡುವುದರಿಂದ ಸಂಪೂರ್ಣವಾಗಿ ವಾಸಿ ಮಾಡಬಹುದು. ಒಂದು ವೇಳೆ ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಇದ್ದರೆ ಶಸ್ತ್ರಚಿಕಿತ್ಸೆ ಜೊತೆಗೆ Chemo therapy ಮತ್ತು ರೇಡಿಯೋ ಥೆರಪಿ ಬೇಕಾಗುತ್ತದೆ. ಆದ್ದರಿಂದ ಇದನ್ನು ಮೊದಲನೇ ಹಂತದಲ್ಲೇ ಕಂಡುಹಿಡಿಯುವುದು ಬಹುಮುಖ್ಯ.

– ಡಾ. ರಮೇಶ್, ಆಲ್ಟಿಯಸ್ ಹಾಸ್ಪಿಟಲ್
# 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಎಂಟ್ರನ್ಸ್, ಎಂಇಐ ಪಾಲಿಟೆಕ್ ಎದುರು, ರಾಮಮಂದಿರದ ಹತ್ತಿರ, ಬೆಂಗಳೂರು – 10
9900031842, 080 – 23151873

Leave a Comment