ಸ್ತನ್ಯಪಾನದ ಮಹತ್ವ

ಮಗುವೊಂದು ಹುಟ್ಟುತ್ತಲೇ ಅದರ ಮೊದಲ ಆಹಾರ ತಾಯಿಯ ಹಾಲು. ಹಾಗೆಂದೇ ತಾಯಿಯ `ಹಾಲನ್ನು ಅಮೃತ ಸಮಾನ` ಎಂದು ಪರಿಗಣಿಸಲಾಗಿದೆ.
ಅಮ್ಮನ ಮಡಿಲಲ್ಲಿ ಮಲಗಿ ಹಾಲು ಕುಡಿಯುವುದೆಂದರೆ ಮಗುವಿಗೆ ಎಲ್ಲಿಲ್ಲದ ಖುಷಿ. ಅಷ್ಟೇ ಅಲ್ಲ, ತಾಯಿ ಮಗುವಿನ ನಡುವೆ ಮಧುರ ಬಾಂಧವ್ಯಕ್ಕೂ ಹಾಲು ಕುಡಿಸುವ ಪ್ರಕ್ರಿಯೆ ಸಾಕ್ಷಿಯಾಗುತ್ತದೆ.
ಇಂದಿನ ಕೆಲ ಆಧುನಿಕ ಮಹಿಳೆಯರು ಸೌಂದರ್ಯ ರಕ್ಷಣೆಯ ನೆಪದಲ್ಲಿ ಮಗುವಿಗೆ ಹಾಲು ಕುಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಕೆಲವೇ ತಿಂಗಳು ಎದೆಹಾಲು ಕುಡಿಸಿ, ಬಳಿಕ ಮಗುವಿಗೆ ಕೃತಕ ಹಾಲು ಕುಡಿಸಲು ಅಭ್ಯಾಸ ಮಾಡಿಸುತ್ತಾರೆ. ಇದರಿಂದಾಗಿ ಆರೋಗ್ಯ ಹಾಗೂ ಬಾಂಧವ್ಯದ ಸಮಸ್ಯೆಗಳು ಉದ್ಭವಿಸುತ್ತವೆ.
ತಾಯಿಯ ಹಾಲು ಅತ್ಯಂತ ಪುಷ್ಟಿದಾಯಕ ಹಾಗೂ ಆರೋಗ್ಯಕರ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತೀಯ ಶಿಶು ಚಿಕಿತ್ಸಾ ಅಕಾಡೆಮಿ ಮೊದಲ ಆರು ತಿಂಗಳವರೆಗೆ ಮಗುವಿಗೆ ಸ್ತನ್ಯಪಾನವೇ ಸೂಕ್ತ ಎಂದು ಶಿಫಾರಸು ಮಾಡಿವೆ.
ಸ್ತನ್ಯಪಾನದಿಂದ ಏನೇನು ಲಾಭ?
* ತಾಯಿಯ ಹಾಲಿನಲ್ಲಿರುವ ಪ್ರೊಟೀನ್ ಮತ್ತು ಕೊಬ್ಬಿನ ಅಂಶಗಳು ಶಿಶುವಿನ ಬೆಳವಣಿಗೆಗೆ ಸಹಾಯಕವಾಗಿವೆ.
* ಮಗು ಬೆಳವಣಿಗೆ ಹೊಂದಿದಂತೆಲ್ಲ ಅದಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ತಾಯಿಯ ಹಾಲು ನೆರವಾಗುತ್ತದೆ.
* ತಾಯಿಯ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹೀಗಾಗಿ ಮೊದಲ ಆರು ತಿಂಗಳವರೆಗೆ ಅದು ಮಗುವಿಗೆ ಉತ್ತಮ ರಕ್ಷಣೆ ನೀಡುತ್ತದೆ.
* ತಾಯಿ ಹಾಲಿನಲ್ಲಿರುವ ಕೊಲಸ್ಟ್ರಮ್‌ನಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ. ಅದು ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಮಗುವಿನ ಮೂಗು, ಗಂಟಲು, ಕರುಳಿನಲ್ಲಿ ಸಂರಕ್ಷಕ ಕವಚ ನಿರ್ಮಿಸಿ ಶ್ವಾಸಕೋಶ, ಕಿವಿಯ ಸೋಂಕು, ಜಠರ, ಕರುಳಿನ ತೊಂದರೆ, ಮೆದುಳು ಜ್ವರ ಮುಂತಾದ ಮಾರಕ ರೋಗಗಳಿಂದ ಮಗುವನ್ನು ರಕ್ಷಿಸುತ್ತದೆ.
* ತಾಯಿ ಹಾಲು ಕುಡಿದ ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಾಗುತ್ತದೆ. 1700 ಮಕ್ಕಳ ಮೇಲೆ ನಡೆಸಿದ ಒಂದು ಅಧ್ಯಯನ ಕೂಡ ಇದನ್ನು ದೃಢಪಡಿಸಿದೆ.
* ತಾಯಿ ಹಾಲು ಸೇವಿಸುವ ಮಕ್ಕಳಲ್ಲಿ ಡಯೇರಿಯಾದ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ.
* ಸ್ತನ್ಯಪಾನ ಒಂದು ಖರ್ಚಿಲ್ಲದ ಆರೋಗ್ಯದಾಯಕ ವಿಧಾನ.
* ಮಗುವಿಗೆ ಹಾಲು ಕುಡಿಸುವುದರಿಂದ ಮೇಲಿಂದ ಮೇಲೆ ಆಸ್ಪತ್ರೆಗೆ ಭೇಟಿ ಕೊಡುವ ಸಾಧ್ಯತೆ ಕಡಿಮೆಗೊಳ್ಳುತ್ತದೆ.
* ತಾಯಿ ಹಾಲು ಶುದ್ಧತೆಯ ಪ್ರತೀಕ. ಹೀಗಾಗಿ ಮಗುವಿಗೆ ಆಹಾರದ ಅಲರ್ಜಿಯ ಅಪಾಯದಿಂದ ದೂರ ಇಡುತ್ತದೆ. ಎಕ್ಸಿಮಾ, ಅಸ್ತಮಾದ ಅಪಾಯವನ್ನು ಕಡಿಮೆಗೊಳಿಸುತ್ತದೆ.
* ತಾಯಿ ಹಾಲು ಮಗುವಿಗೆ ಉನ್ನತ ಮಟ್ಟದ ಕೊಬ್ಬನ್ನು ಪೂರೈಸುತ್ತದೆ. ಇದರಿಂದಾಗಿ ಮಗುವಿನ ಬೌದ್ಧಿಕ ಮಟ್ಟ ಹೆಚ್ಚಳವಾಗಲು ಕಾರಣವಾಗುತ್ತದೆ.
* ತಾಯಿ ಮತ್ತು ಮಗುವಿನ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸುತ್ತದೆ. ಇದು ಮಗುವಿನ ಮಾನಸಿಕ ಆರೋಗ್ಯಕ್ಕೆ ನೆರವಾಗುತ್ತದೆ.
* ಇದು ಭವಿಷ್ಯದಲ್ಲಿ ಉಂಟಾಗುವ ಬೊಜ್ಜಿನ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
* ಉಸಿರಾಟದ ಸಮಸ್ಯೆಗಳಿಂದ ಮಗುವಿಗೆ ರಕ್ಷಣೆ ನೀಡಲು ತಾಯಿ ಹಾಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
* ಮುಖದ ನರಗಳ ಸಮೃದ್ಧ ಬೆಳವಣಿಗೆಗೆ ತಾಯಿ ಹಾಲು ನೆರವಾಗುತ್ತದೆ.
ತಾಯಿಗೆ ಏನೇನು ಲಾಭ?
ಎದೆಹಾಲು ಕುಡಿಸುವುದು ಕೇವಲ ಮಗುವಿಗಷ್ಟೇ ಲಾಭವಲ್ಲ, ಅದರಿಂದ ತಾಯಿಗೂ ಸಾಕಷ್ಟು ದೈಹಿಕ, ಮಾನಸಿಕ ಅನುಕೂಲಗಳು ಲಭಿಸುತ್ತವೆ.
* ಎದೆಹಾಲು ಕುಡಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
* `ಆಸ್ಟಿಯೊಪೊರೊಸಿಸ್` ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ತಾಯಿಯನ್ನು ರಕ್ಷಿಸುತ್ತದೆ.
* ಗರ್ಭಾವಸ್ಥೆಯಲ್ಲಿ ಉಂಟಾದ ಬೊಜ್ಜನ್ನು ನಿವಾರಿಸಲು ಸ್ತನ್ಯಪಾನ ಸಹಾಯ ಮಾಡುತ್ತದೆ.
* ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
* ಸ್ತನ್ಯ ಪಾನದಿಂದ ತಾಯಿಗೆ ಉತ್ತಮ ನಿದ್ರೆ ಹಾಗೂ ನಿರಾಳತೆಯ ಅನುಭೂತಿ ಉಂಟಾಗುತ್ತದೆ.
* ಮಗುವಿನ ಬಗ್ಗೆ ಅರಿತುಕೊಳ್ಳಲು ನೆರವಾಗುತ್ತದೆ. ಅದರ ಪರಿಪೂರ್ಣ ಬೆಳವಣಿಗೆ ಹೇಗೆ ಕಾರ್ಯ ಪ್ರವೃತ್ತರಾಗಬೇಕೆಂಬ ಉಪಾಯವನ್ನು ಸೂಚಿಸುತ್ತದೆ.
ಎದೆಹಾಲು ಕುಡಿಸುವುದು ಮಗುವಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿದಂತೆ. ಹೀಗಾಗಿ ಮೊದಲ ಆರು ತಿಂಗಳ ತನಕ ಸ್ತನ್ಯಪಾನ ಮಾಡುವುದನ್ನು ಆದ್ಯಕರ್ತವ್ಯ ಎಂದು ಭಾವಿಸಿ.
ಡಾ. ರಮೇಶ್
ಅಲ್ಟಿಯಸ್ ಆಸ್ಪತ್ರೆ.
ರಾಜಾಜಿನಗರ, ಬೆಂಗಳೂರು
e-mail:endoram2006@yahoo.in

Leave a Comment