ಸ್ತನದಲ್ಲಿ ಗೆಡ್ಡೆ

ಸ್ತನ ಭಾಗದಲ್ಲಿ ಕಂಡುಬರುವ ಯಾವುದೇ ಬಗೆಯ ಗಂಟನ್ನು ’ಫೈಬ್ರೊಅಡಿನೋಮ’ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ೨೦ ರಿಂದ ೪೦ ವಯಸ್ಸಿನ ಮಹಿಳೆಯರಲ್ಲಿ ಈ ತೆರನಾದ ಗಂಟುಗಳು ಅಥವಾ ಗೆಡ್ಡೆಗಳು ಗೋಚರವಾಗಬಹುದು.
ಮಹಿಳೆಯರಲ್ಲಿ ಇದರ ಶೇಕಡಾವಾರು ಪ್ರಮಾಣ ಎಷ್ಟು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಗೆಡ್ಡೆ ಒಂದೇ ಸ್ತನದಲ್ಲಿ ಇರಬಹುದು ಅಥವಾ ಎರಡೂ ಸ್ತನದಲ್ಲಿ. ಅವುಗಳ ಸಂಖ್ಯೆಯ ಬಗೆಗೂ ನಿಖರತೆ ಇರುವುದಿಲ್ಲ. ಒಂದೇ ಇರಬಹುದು ಅಥವಾ ಒಂದಕ್ಕಿಂತ ಹೆಚ್ಚು ಇರಬಹುದು. ಗೆಡ್ಡೆ ಅಥವಾ ಗೆಡ್ಡೆಗಳ ಗಾತ್ರ ಬಟಾಣಿ ಕಾಳಿನ ಗಾತ್ರದಷ್ಟು ಅಂದರೆ ೧ಸೆಂ.ಮೀ ನಿಂದ ೩ ಸೆಂ.ಮೀ ನಷ್ಟು ದೊಡ್ಡದಾಗಿರುತ್ತದೆ.
ಎಲ್ಲ ಗೆಡ್ಡೆಗಳು ಕಾನ್ಸರ್’ಕಾರಕ ಅಲ್ಲ
ಸ್ತನದಲ್ಲಿ ಕಂಡುಬರುವ ಎಲ್ಲ ಗೆಡ್ಡೆಗಳು ಕಾನ್ಸರ್’ಕಾರಕ ಆಗಿರುವುದಿಲ್ಲ. ಶೇ. ೧೦ರಷ್ಟು ಗೆಡ್ಡೆಗಳು ಮಾತ್ರ ಕಾನ್ಸರ್ ಆಗಿರಬಹುದಾದ ಸಾಧ್ಯತೆಗಳು ಇರಬಹುದು.
ಒಂದು ವೇಳೆ ಸ್ತನದೊಳಗೆ ಗೆಡ್ಡೆ ಇದೆ ಎಂದು ಅನ್ನಿಸಿದರೆ ಅದು ’ಬಿನೈನ್’ ಅಂದರೆ ಯಾವುದೇ ಅಪಾಯವನ್ನುಂಟು ಮಾಡದ ಅಂಗಾಂಶವಾಗಿರಬಹುದು. ಹೀಗಾಗಿ ನೀವೇ ಯಾವುದೇ ನಿರ್ಧಾರಕ್ಕೆ ಬರಬೇಡಿ. ವೈದ್ಯರ ಬಳಿ ಹೋಗಿ ಪರೀಕ್ಷಿಸಿ.
ಗೆಡ್ಡೆ ಹೇಗಿರುತ್ತದೆ?
*ಸ್ತನ ಭಾಗದಲ್ಲಿ ಕಂಡುಬರುವ ಗಂಟು ರಬ್ಬರ್’ನಂತೆ ಗಟ್ಟಿಯಾಗಿರುತ್ತದೆ. ಕೈಯಿಂದ ಮುಟ್ಟಿದಾಗ ಅತ್ತಿತ್ತ ಸರಿದಾಡುತ್ತದೆ.
*ಋತಸ್ರಾವದ ಮುಂಚೆ ಅಥವಾ ಋತುಸ್ರಾವದ ದಿನಗಳಲ್ಲಿ ಗೆಡ್ಡೆ ಇರುವ ಭಾಗದಲ್ಲಿ ಸ್ವಲ್ಪ ನೋವು ಅನಿಸುತ್ತದೆ. ಆ ಬಳಿಕ ಮತ್ತೆ ಯಾವುದೇ ನೋವು ಅನಿಸುವುದಿಲ್ಲ.
*ಕಾನ್ಸರ್ ಅಲ್ಲದ ಗಂಟು ಮೊದಲು ಯಾವ ಗಾತ್ರದಲ್ಲಿ ಇರುತ್ತೊ , ಆ ಬಳಿಕ ವರ್ಷಾನುಗಟ್ಟಲೆ ಅದೇ ಗಾತ್ರದಲ್ಲಿ ಇರುವುದು.
*ಸ್ತನ ಭಾಗದಲ್ಲಿ ಇರುವ ಗಂಟು ಕಾನ್ಸರ್’ಕಾರಕ ಆಗಿದ್ದರೆ, ಅದು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುತ್ತದೆ. ಹೀಗಾಗಿ ಅದರ ಬೆಳವಣಿಗೆಯ ಬಗ್ಗೆ ಗಮನವಿಡಬೇಕು.
ಸ್ವಯಂ ಪರೀಕ್ಷೆ
ಸ್ತನದಲ್ಲಿ ಗಂಟುಗಳೇನಾದರೂ ಉತ್ಪತ್ತಿಯಾಗುತ್ತಿವೆಯೇ ಎಂದು ಕಂಡುಕೊಳ್ಳಲು ಋತುಸ್ರಾವದ ದಿನಗಳ ಬಳಿಕ ನೀವೇ ಸ್ತನಗಳ ಪರೀಕ್ಷೆ ಮಾಡಿಕೊಳ್ಳಬೇಕು. ಎಡಗೈನಿಂದ ಬಲಭಾಗದ ಸ್ತನವನ್ನು ಹಾಗೂ ಬಲಗೈನಿಂದ ಎಡಭಾಗದ ಸ್ತನವನ್ನು ಸಮಗ್ರವಾಗಿ ಮುಟ್ಟಿ ನೋಡಬೇಕು. ಏನಾದರೂ ವ್ಯತ್ಯಾಸ ಕಂಡುಬಂದರೆ ಆ ಬಗ್ಗೆ ವೈದ್ಯರ ಗಮನಕ್ಕೆ ತರಬೇಕು.
ವೈದ್ಯರ ಪರೀಕ್ಷೆ
ಸ್ವಪರೀಕ್ಷೆಯಲ್ಲಿ ಗಂಟುಗಳೇನಾದರೂ ಇದ್ದಿರುವುದು ಗಮನಕ್ಕೆ ಬಂದರೆ, ವೈದ್ಯರು ಆ ಗಂಟು ಕ್ಯಾನ್ಸರ್’ಕಾರಕ ಗಂಟು ಆಗಿರಬಹುದೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಲ್ಟ್ರಾಸೌಂಡ್, ಮೆಮೊಗ್ರಾಂ ಎಕ್ಸರೇ ಅಥವಾ ಅಲ್ಟ್ರಾ ಸೊನೊಮೆಮೊಗ್ರಾಂ ಪರೀಕ್ಷೆ ನಡೆಸುತ್ತಾರೆ. ಇನ್ನೂ ಹೆಚ್ಚಿನ ಪರೀಕ್ಷೆಗಾಗಿ ವೈದ್ಯರು ಗೆಡ್ಡೆಯೊಂದರಲ್ಲಿನ ದ್ರವ ಅಥವಾ ಜೀವಕೋಶವನ್ನು ಸೂಜಿಯಿಂದ ತೆಗೆದು (ನೀಡಲ್ ಬಯಾಪ್ಸಿ) ಅದನ್ನು ಪ್ರಯೋಗಾಲಯಕ್ಕೆ ಕಳಿಸುತ್ತಾರೆ. ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆಯೆಂದಾದರೆ ಕ್ಯಾನ್ಸರ್ ತಜ್ಞರಿಗೆ ಶಿಪಾರಸ್ಸು ಮಾಡುತ್ತಾರೆ
ಯಾವುದೇ ಒಂದು ಗಂಟು ೩ ಸೆಂ.ಮೀ.ಗಿಂತ ಹೆಚ್ಚಾಗಿದ್ದರೆ ಮಾತ್ರ ಅದನ್ನು ತೆಗೆದುಹಾಕಲು ಶಿಪಾರಸ್ಸು ಮಾಡುತ್ತಾರೆ.
ಯಾರು ಹೆಚ್ಚು ಎಚ್ಚರದಿಂದಿರಬೇಕು?
* ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್, ಓವೇರಿಯನ್ ಕ್ಯಾನ್ಸರ್, ಕೋಲನ್ ಕ್ಯಾನ್ಸರ್ ಇತಿಹಾಸ ಇದ್ದರೆ ಅಂಥವರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಬಯಾಪ್ಸಿ ಪರೀಕ್ಷೆಗೆ ಒಳಗಾಗಲೇಬೇಕು.
ಮಾಹಿತಿಗೆ: ಲೇಖಕರು :ಡಾ.ಬಿ.ರಮೇಶ್,
ಆಲ್ಟಿಯಸ್ ಹಾಸ್ಪಿಟಲ್
೯೬೬೩೩೧೧೧೨೮ / ೦೮೦-೨೮೬೦೬೭೮೯

Leave a Comment