ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ

ಮೈಸೂರು, ಸೆ.1- ಮಹಾನಗರ ಪಾಲಿಕೆ ಚುನಾವಣೆಗೆ ಮುಕ್ತಾಯ ಕಂಡಿದ್ದು, ಎಲ್ಲ 65 ವಾರ್ಡುಗಳಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿದೆ. ನಗರದ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಇರುವ ಸ್ಟ್ರಾಂಗ್ ರೂಮ್ ಸುತ್ತ ಸಿಸಿಟಿವಿ ಕಣ್ಗಾವಲಿದ್ದು, ಭದ್ರ ಪೊಲೀಸ್ ಪಹರೆ ಹಾಕಲಾಗಿದೆ. ಸೆ. 3ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಶೇ. 50.01ರಷ್ಟು ಮತದಾನ
ನೆನ್ನೆ ನಡೆದ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರ ನೀರಸ ಪ್ರತಿಕಿಯೆ ವ್ಯಕ್ತಪಡಿಸಿದ್ದಾನೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರಣ ವರ್ಷದಿಂದ ವರ್ಷಕ್ಕೆ ಮತದಾನ ಪ್ರಮಾಣ ಏರಿಕೆಯಾಗುವುದು ಸಹಜ. ಆದರೆ, ಈ ಬಾರಿ ಶೇ. 50.01ರಷ್ಟು ಅಂದರೆ ಒಟ್ಟು ಮತದಾರರ ಪೈಕೆ ಅರ್ಧದಷ್ಟು ಜನ ಮಾತ್ರ ತಮ್ಮ ಹಕ್ಕುಚಲಾಯಿಸಿದ್ದಾರೆ. ಕಳೆದ ಬಾರಿಗಿಂತ ಶೇ. 5.71ರಷ್ಟು ಮತದಾನ ಪ್ರಮಾಣ ಕುಸಿತ ಕಂಡಿದ್ದು, ಇದು ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.
ನೋಟಾ ಆತಂಕ
ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಗಿತ್ತು. ಜೊತೆಗೆ ಈ ಬಾರಿ ವಿಶೇಷವಾಗಿ ನೋಟಾ ಪ್ರಕಾರವನ್ನು ಪರಿಚಯಿಸಲಾಗಿತ್ತು. ಚುನಾವಣಾ ಆಯೋಗದ ಈ ಕ್ರಮ ಹಲವು ಅಭ್ಯರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಟಿಕೆಟ್ ದೊರೆಯದ ಹಲವರು ನೇರವಾಗಿ ಬಂಡಾಯ ಸಾರಿದ್ದರೆ, ಇನ್ನೂ ಕೆಲವರು ತೆರೆಮರೆಯಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ತಮಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹಲವು ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಗೆ ನೋಟಾ ಮೂಲಕ ಉತ್ತರ ನೀಡುವಂತೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಒಂದು ವೇಳೆ ಈ ತಂತ್ರ ಫಲಿಸಿದ್ದೇ ಆದರೆ, ಗೆಲ್ಲುವ ಅಭ್ಯರ್ಥಿ ಸೋಲುವ ಅಥವಾ ಸೋಲುವ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.
ಗೆಲುವಿನ ಲೆಕ್ಕಾಚಾರ
ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿರುವ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ನಡೆದಿರುವ ಮತದಾನದ ಪ್ರಮಾಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವ ಬೂತ್ ನಲ್ಲಿ ತಮಗೆ ಮತಗಳು ಹೆಚ್ಚು ಬಂದಿವೆ, ಯಾವ ಬೂತ್‍ನಲ್ಲಿ ಬಂದಿಲ್ಲ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಅಂಕಿ ಅಂಶಗಳ ಆಧಾರದ ಮೇಲೆ ಸೋಲು ಗೆಲುವಿನ ಸಾಧ್ಯತೆಗಳನ್ನು ವಿಶ್ಲೇಷಿಸಲಾಗುತ್ತಿದೆ.

Leave a Comment