ಸ್ಟಂಟ್ ಉಪಕರಣ ದರ ಗಣನೀಯ ಇಳಿಕೆ

ಬೆಂಗಳೂರು, ಫೆ.೧೭: ಹೃದಯ ಸಂಬಂಧಿ ರೋಗಿಗಳು ಬಳಸುವ “ಸ್ಟಂಟ್’ ಉಪಕರಣದ ದರವನ್ನು ಕೇಂದ್ರ ಸರ್ಕಾರ ಗಣನೀಯ ಪ್ರಮಾಣದಲ್ಲಿ ಇಳಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಫೆ.೧೩ರಂದು ಮಧ್ಯರಾತ್ರಿಯಿಂದ ಹೊಸ ದರ ಅನ್ವಯವಾಗಲಿದ್ದು, ಸಾಮಾನ್ಯ ಸ್ಟಂಟ್ ಉಪಕರಣ (ಮೆಟಲ್ ಸ್ಟಂಟ್) ಮಾರುಕಟ್ಟೆಯಲ್ಲಿ ೪೦ರಿಂದ ೫೦ ಸಾವಿರ ರೂ.ಗಳಿಗೆ ಮಾರಾಟವಾಗುತ್ತಿತ್ತು. ಇನ್ನು ಮುಂದು ಇದು ೭೨೬೦ ರೂ.ಗಿಂತ ಹೆಚ್ಚಿಗೆ ಮಾರಾಟಮಾಡುವಂತಿಲ್ಲ. ಅದೇ ರೀತಿ ವಿಶೇಷ ಸ್ಟಂಟ್‌ಗಳು ಮಾರುಕಟ್ಟೆಯಲ್ಲಿ ಪ್ರಸಕ್ತ ೧.೭೦ ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಮುಂದೆ ಅದು ೨೯,೬೦೦ ರೂ.ಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸುವ ಔಷಧ ಮಾರಟಗಾರರು ಮತ್ತು ಉತ್ಪಾದಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹೃದಯ ಚಿಕಿತ್ಸೆಯ ಸ್ಟಂಟ್‌ನ ಐತಿಹಾಸಿಕ ಬೆಲೆ ಇಳಿಕೆ-ಒಂದು ನೋಟ ಕುರಿತು ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ೨೦೧೫ರ ಆರೋಗ್ಯ ಇಲಾಖೆಯ ವರದಿ ಪ್ರಕಾರ ದೇಶದಲ್ಲಿ ೬.೧೯ ಕೋಟಿ ಜನರು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ದೇಶದಲ್ಲಿ ೪ ಲಕ್ಷ ಸ್ಟಂಟ್‌ಗಳನ್ನು ರೋಗಿಗಳಿಗೆ ಅಳವಡಿಸಲಾಗಿದೆ. ಈ ವರ್ಷ ಅದು ಐದು ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಈ ಸ್ಟಂಟ್‌ನ ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ ಅದನ್ನು ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಬೆಲೆ ಇಳಿಸುವ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಅಗತ್ಯ ಔಷಧಿಗಳ ಸೂಚಿಯಲ್ಲಿ ಇದುವರೆಗೆ ಸ್ಟಂಟ್‌ಗಳನ್ನು ಸೇರಿಸಿರಲಿಲ್ಲ. ಇದರಿಂದ ಮಾರಾಟಗಾರರು ಹೆಚ್ಚಿನ ದರದಲ್ಲಿ ಈ ಉಪಕರಣವನ್ನು ಮಾರಾಟ ಮಾಡುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಈ ಪಟ್ಟಿಗೆ ಇತ್ತೀಚೆಗೆ ಸ್ಟಂಟ್ ಉಪಕರಣ ಸೇರಿಸಿ, ಅದರ ಬೆಲೆಯನ್ನು ೫ ಪಟ್ಟು ಇಳಿಸಿದೆ ಎಂದು ಅನಂತ ಕುಮಾರ್ ತಿಳಿಸಿದರು.

೫೦೦೦ ಕೋಟಿ ರೂ. ಉಳಿತಾಯ
ಸ್ಟಂಟ್ ಉಪಕರಣದ ಬೆಲೆ ಇಳಿಸಿರುವುದರಿಂದ ೫೦೦೦ ಕೋಟಿ ರೂ. ಹಣ ರೋಗಿಗಳಿಗೆ ಉಳಿತಾಯವಾಗಲಿದೆ. ಇನ್ನು ಮುಂದೆ ಹೃದಯಾಲಯಗಳು, ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶೇಕಡಾ ೧೫ರಷ್ಟು ಬಡ್ಡಿಯೊಂದಿಗೆ ದಂಡ ವಸೂಲಿ ಮಾಡಲಾಗುವುದು. ಮಾತ್ರವಲ್ಲ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸ್ಟಂಟ್ ಉತ್ಪಾದಕರಿಗೆ ಎಚ್ಚರಿಕೆ
ಕೇಂದ್ರ ಸರ್ಕಾರ ಸ್ಟಂಟ್ ಉಪಕರಣದ ಬೆಲೆ ಇಳಿಸಿರುವುದರಿಂದ ಮಾರುಕಟ್ಟೆಯಲ್ಲಿ ಸ್ಟಂಟ್ ಅಭಾವ ಸೃಷ್ಟಿಸುವ ಉತ್ಪಾದಕರು ಮತ್ತು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ ಅನಂತ್ ಕುಮಾರ್, ಈ ಹಿಂದೆ ಉತ್ಪಾದಿರುವಷ್ಟೇ ಪ್ರಮಾಣದಲ್ಲಿ ಸ್ಟಂಟ್ ಉತ್ಪಾದಿಸಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅನುಮತಿ ರದ್ದು ಮಾಡಲಗುವುದು ಎಂದು ತಿಳಿಸಿದರು.
ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗೆ ಈ ಸಂಬಂಧ ಅಧಿಸೂಚನೆ ನೀಡಲಾಗಿದೆ. ಆರೋಗ್ಯ ಸಚಿವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಕೇಂದ್ರದ ಈ ಐತಿಹಾಸಿಕ ನಿರ್ಧಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದು ಹೇಳಿದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದೊರೆಸ್ವಾಮಿ ಮಾತನಾಡಿ, ಪಿಇಎಸ್ ಫಾರ್ಮಸಿಯಲ್ಲಿ ಶೀಘ್ರವೇ ಜೆನರಿಕ್ ಔಷಧಾಲಯ ಸ್ಥಾಪಿಸಿ, ಬಡವರಿಗೆ ಕಡಿಮೆ ದರದಲ್ಲಿ ಔಷಧ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಮುಖಂಡರಾದ ಸದಾಶಿವ, ಸುಬ್ಬಣ್ಣ ಮತ್ತಿತರರು ಹಾಜರಿದ್ದರು.

Leave a Comment