ಸ್ಕೂಲ್ ಬಸ್ ಮೇಲೆ ಉರುಳಿದ ಮರ ೧೭ ಮಕ್ಕಳು ಪ್ರಾಣಾಪಾಯದಿಂದ ಪಾರು

ಮಂಗಳೂರು, ಆ.೧೪- ಚಲಿಸುತ್ತಿದ್ದ ಸ್ಕೂಲ್ ಬಸ್ ಮೇಲೆ ಭಾರೀ ಗಾತ್ರದ ಮರವೊಂದು ಬುಡಸಮೇತ ಉರುಳಿಬಿದ್ದ ಘಟನೆ ಇಂದು ಬೆಳಗ್ಗೆ ನಗರದ ನಂತೂರು ಸರ್ಕಲ್ ಬಳಿ ನಡೆದಿದೆ. ಘಟನೆಯಲ್ಲಿ ಶಾಲಾ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಘಟನೆಯ ವಿವರ:
ನಗರದ ಕೇಂಬ್ರಿಡ್ಜ್ ಸ್ಕೂಲ್ ಸಂಸ್ಥೆಗೆ ಸೇರಿದ ಬಸ್ ನಂತೂರು ಸರ್ಕಲ್ ಸಮೀಪ ಸಂಚರಿಸುತ್ತಿದ್ದಾಗ ಭಾರೀ ಮಳೆಯ ಕಾರಣದಿಂದ ಧರೆಯ ಮಣ್ಣು ಸಡಿಲಗೊಂಡು ಕುಸಿಯತೊಡಗಿದ್ದು ಈ ವೇಳೆ ಅಲ್ಲೇ ಇದ್ದ ಭಾರೀ ಗಾತ್ರದ ಮರ ಬುಡಸಮೇತ ಕುಸಿದು ಬಸ್ಸಿನ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಶಾಲಾ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಬುಲೆಟ್ ಟ್ಯಾಂಕರ್ ಮೇಲೂ ಮರ ಉರುಳಿಬೀಳಲಿದ್ದು ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯ ತಪ್ಪಿದೆ. ಶಾಲಾ ಮಕ್ಕಳನ್ನು ಬೇರೆ ವಾಹನದ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಿಂದಾಗಿ ಕೆಲಕಾಳ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ನಿನ್ನೆಯಿಂದ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗುತ್ತಿದ್ದು ಹಳ್ಳ, ಕೆರೆಗಳು ತುಂಬಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಗ್ಗುಪ್ರದೇಶಗಳಲ್ಲಿ ನೆರೆನೀರು ನಿಂತಿದ್ದು ಮಕ್ಕಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ನೆನಪಾದ ಉಳಾಯಿಬೆಟ್ಟು ದುರಂತ!
೨೦೦೮, ಆ.೧೪ರ ಮುಂಜಾನೆ ನಗರದ ಹೊರವಲಯದ ಗುರುಪುರ ಉಳಾಯಿಬೆಟ್ಟು ಬಳಿ ಭಾರೀ ಅನಾಹುತವೊಂದು ಘಟಿಸಿತ್ತು. ಗುರುಪುರ ಬಾಮಿ ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಸ್ಕೂಲ್ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನೀರು ತುಂಬಿ ನದಿಯಂತಾಗಿದ್ದ ಗದ್ದೆಗೆ ಬಿದ್ದು ೮ ಮಕ್ಕಳ ಸಮೇತ ೧೧ ಮಂದಿ ದಾರುಣ ಸಾವನ್ನಪ್ಪಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ಮಕ್ಕಳು ವಿಧಿಯ ಕ್ರೂರಲೀಲೆಗೆ ಬಲಿಯಾಗಿದ್ದರೆ ಹೆತ್ತವರು ಶೋಕಸಾಗರದಲ್ಲಿ ಮುಳುಗಿದ್ದರು. ಘಟನೆ ನಡೆದು ಇಂದಿಗೆ ೧೧ ವರ್ಷ ಪೂರ್ತಿಯಾಗುತ್ತಿದೆ. ಇದೇ ವೇಳೆ ಸ್ಕೂಲ್ ಬಸ್ ಮೇಲೆ ಮರವೊಂದು ಉರುಳಿಬಿದ್ದಿರುವುದು ಶಾಲಾ ಮಕ್ಕಳ ಹೆತ್ತವರು ಮತ್ತು ಪೋಷಕಕ ಆತಂಕಕ್ಕೆ ಕಾರಣವಾಗಿದೆ.

Leave a Comment