ಸೋಲು ತಪ್ಪಿಸಿಕೊಳ್ಳಲು ಲಂಕಾ ಶತಪ್ರಯತ್ನ ಭಾರತದ ಗೆಲುವಿಗೆ ೫ ವಿಕೆಟ್ ಬಾಕಿ

ನವದೆಹಲಿ, ಡಿ.೬: ಕೋಟ್ಲಾ ಟೆಸ್ಟ್ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಶ್ರೀಲಂಕಾ ಶತಾಯಗತಾಯ ಪ್ರಯತ್ನ ಮುಂದುವರಿಸಿದೆ. ಟೀಮ್ ಇಂಡಿಯಾ ನೀಡಿರುವ ೪೧೦ರನ್‌ಗಳ ಬೃಹತ್ ಸವಾಲನ್ನು ಬೆನ್ನಟ್ಟುವ ಬದಲು, ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಲು ಲಂಕಾ ಬ್ಯಾಟ್ಸ್‌ಮನ್‌ಗಳು ಹೋರಾಟವನ್ನು ಚಾಲ್ತಿಯಲ್ಲಿರಿಸಿದ್ದಾರೆ. ೩ ವಿಕೆಟ್ ನಷ್ಟದಲ್ಲಿ ೩೧ ರನ್‌ಗಳಿಂದ ದಿನದಾಟ ಆರಂಭಿಸಿದ್ದ ಶ್ರೀಲಂಕಾವನ್ನು ಬೇಗನೇ ಆಲೌಟ್ ಮಾಡುವ ಯೋಚನೆ ಕೊಹ್ಲಿ ಬಳಗದ್ದಾಗಿತ್ತು. ಅಂತಿಮ ದಿನದ ಆರನೇ ಓವರ್‌ನಲ್ಲಿ ಆಗಷ್ಟೇ ಖಾತೆ ತೆರೆದಿದ್ದ ಅನುಭವಿ ಬ್ಯಾಟ್ಸ್‌ಮನ್ ಆಂಜಲೋ ಮ್ಯಾಥ್ಯೂಸ್‌ರನ್ನು ಸ್ಪಿನ್ ಬಲೆಯಲ್ಲಿ ಕೆಡವಿದ ಬರ್ತ್‌ಡೆ ಬಾಯ್ ರವಿಂದ್ರ ಜಡೇಜಾ ಭಾರತಕ್ಕೆ ದಿನದ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ೫ನೆ ವಿಕೆಟ್‌ಗೆ ಧನಂಜಯ ಡಿ-ಸಿಲ್ವಾ ಜೊತೆಗೂಡಿದ ಮೊದಲ ಇನ್ನಿಂಗ್ಸ್‌ನ ಶತಕ ವೀರ ನಾಯಕ ದಿನೇಶ್ ಚಾಂಡಿಮಾಲ್ ಭಾರತೀಯ ಬೌಲರ್‌ಗಳ ಯೋಜನೆಯನ್ನು ತಲೆಕೆಳಗಾಗಿಸಿದರು. ೪ ವಿಕೆಟ್ ಕಳೆದುಕೊಂಡಿದ್ದರೂ ವಿಚಲಿತರಾಗದೆ ಬ್ಯಾಟ್ ಬೀಸಿದ ಯುವ ಬ್ಯಾಟ್ಸ್‌ಮನ್ ಧನಂಜಯ ಡಿ ಸಿಲ್ವಾ ವೃತ್ತಿ ಜೀವನದ ೧೧ನೇ ಟೆಸ್ಟ್‌ನಲಿ ಮೂರನೇ ಶತಕ ದಾಖಲಿಸಿ ಲಂಕಾ ಪಲಿಗೆ ಅಪತ್ಭಾಂದನಾದರು.
೧೩ ರನ್‌ಗಳಿಂದ ದಿನದಾಟ ಆರಂಭಿಸಿದ್ದ ಡಿಸಿಲ್ವಾ, ೧೮೮ ಎಸೆತಗಳನ್ನು ಎದುರಿಸಿ ೧೩ ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನಿಂದ ಶತಕ ಪೂರ್ತಿಗೊಳಿಸಿದರು. ಮ್ಯಾಥ್ಯೂಸ್ ವಿಕೆಟ್ ಪತನವಾದ ಬಳಿಕ ಎಚ್ಚರಿಕೆಯ ಆಟವಾಡಿದ ಧನಂಜಯ-ಚಾಂಡಿಮಾಲ್ ಜೋಡಿ ಭೋಜನಾ ವಿರಾಮದ ವರೆಗೂ ವಿಕೆಟ್ ಕಾಯ್ದುಕೊಳ್ಳುವುದರ ಜೊತೆಗೆ ಪಂದ್ಯವನ್ನು ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದರು. ಈ ನಡುವೆ ೫ನೆ ವಿಕೆಟ್‌ಗೆ ಶತಕದ ಜೊತೆಯಾಟದಲ್ಲೂ ಭಾಗಿಯಾದರು. ೫೫ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ ಆಶ್ವಿನ್ ಭಾರತಕ್ಕೆ ಬ್ರೇಕ್ ತಂದುಕೊಟ್ಟರು. ೩೬ ರನ್‌ಗಳಿಸಿ ಎಚ್ಚರಿಕೆಯಿಂದ ಆಡುತ್ತಿದ್ದ ನಾಯಕ ಚಾಂಡಿಮಾಲ್ ಆಶ್ವಿನ್ ಎಸೆತವನ್ನು ಅಂದಾಜಿಸಲಾದರೆ ಕ್ಲೀನ್ ಬೌಲ್ಡ್ ಆಗಿ ನಿರಾಸೆಯಿಂದ ಮರಳಿದರು. ಇದಕ್ಕೂ ಮೊದಲು ಮೊದಲ ಅವಧಿಯಲ್ಲಿ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಎರಡು ಬಾರಿ ಓವರ್ ಸ್ಟೆಂಪ್ ಮಾಡಿದ್ದು ಲಂಕಾ ಪಾಲಿಗೆ ವರದಾನವಾಯಿತು. ೫೬ ಓವರ್ ಬೌಲಿಂಗ್ ಮಾಡಿ ೧೫೦ ರನ್ ಬಿಟ್ಟುಕೊಟ್ಟರೂ ೫ನೇ ದಿನದಲ್ಲಿ ಭಾರತದ ಬೌಲರ್‌ಗಳಿಗೆ ದಕ್ಕಿದ್ದು ಕೇವಲ ೨ ವಿಕೆಟ್ ಮಾತ್ರ. ಲಂಕಾ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ದೃಢ ನಿರ್ಧಾರ ಮಾಡಿದ್ದು ಅವರ ರಕ್ಷಣಾತ್ಮಕ ಬ್ಯಾಟಿಂಗ್ ಶೈಲಿಯಲ್ಲಿ ಎದ್ದುಕಾಣುತ್ತಿತ್ತು. ೪೧೦ ರನ್‌ಗಳ ಟಾರ್ಗೆಟ್ ಬೆನ್ನತ್ತಿರುವ ಲಂಕಾ ಇತ್ತೀಚಿನ ವರದಿ ಪ್ರಕಾರ ೫ ವಿಕೆಟ್ ನಷ್ಟದಲ್ಲಿ ೧೮೫ ರನ್‌ಗಳಿಸಿದ್ದು, ಸೆಟ್ ಬ್ಯಾಟ್ಸ್‌ಮನ್ ಡಿ ಸಿಲ್ವಾ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ರೋಶನ್ ಸಿಲ್ವಾ ೧೯ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಇನ್ನೂ ೩೫ ಓವರ್‌ಗಳ ಆಟ ಬಾಕಿ ಇದ್ದು, ಪಂದ್ಯ ಡ್ರಾ ಆದರೆ ಲಂಕಾ ಪಾಲಿಗೆ ದೊಡ್ಡ ಸಾಧನೆ ಆಗಲಿದೆ.

Leave a Comment