ಸೋಲಿನಿಂದ ಎಚ್ಚೆತ್ತುಕೊಳ್ಳದ ನಾಯಕರು ಹ್ಯಾರೀಸ್ ಟೀಕೆ

ಬೆಂಗಳೂರು, ಫೆ. ೧೪- ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಸ್ವಪಕ್ಷೀಯರಿಂದಲೇ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿದ್ದು, ಪಕ್ಷದ ಅಧೋಗತಿಗೆ ಕನ್ನಡಿ ಹಿಡಿದಂತಾಗಿದೆ.
ದೆಹಲಿ ಚುನಾವಣೆಯಲ್ಲಿ ಪಕ್ಷ ಎರಡನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿರುವುದು ದೇಶದ ಹೃದಯ ಭಾಗದಲ್ಲೇ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ ಆಗುತ್ತಿದೆ ಎಂಬ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿವೆ.
ಮಂಗಳವಾರ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಕಟುವಾಸ್ತವ ಸಂಗತಿ ಎನ್ನಲಾಗಿದೆ.
ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲದೆ, ತೀವ್ರ ಮುಖಭಂಗ ಅನುಭವಿಸಿದೆ. ಇಂತಹ ಸೋಲುಗಳು ಪಕ್ಷದ ಮುಖಂಡರಿಗೆ ಪಾಠವಾಗಬೇಕೆ ಹೊರತು, ಅಭ್ಯಾಸವಾಗಬಾರದು ಎಂದು ಟ್ವೀಟ್ ಮಾಡಿದ್ದಾರೆ.
ನಾನೊಬ್ಬ ಕಟ್ಟಾಕಾಂಗ್ರೆಸ್ಸಿಗ, ಪಕ್ಷ ಹಲವಾರು ಸೋಲುಗಳ ನಡುವೆಯೂ ಎಚ್ಚೆತ್ತುಕೊಳ್ಳದಿರುವುದು ಆತಂಕಕಾರಿಯಾಗಿದೆ. ಪಕ್ಷದಲ್ಲಿ ಪದಾಧಿಕಾರಿಗಳು ಇರುವುದು ಯಾವ ಕೆಲಸಕ್ಕಾಗಿ? ಪಕ್ಷವನ್ನು ಕಟ್ಟುವುದಕ್ಕಾಗಿಯೋ ಅಥವಾ ಸ್ವಹಿತಾಸಕ್ತಿಗಳಿಗಾಗಿ ಪಕ್ಷವನ್ನು ಬಲಿಕೊಡುವುದಕ್ಕಾಗಿಯೋ? ಎಂದು ಅವರು ಪ್ರಶ್ನಿಸಿದ್ದಾರೆ.
ದೆಹಲಿಯಂತಹ ಫಲಿತಾಂಶಗಳು ಹಲವು ಬಾರಿ ಬಂದಿವೆ. ಆದರೂ ಈ ಬಗ್ಗೆ ಪಕ್ಷ ಯೋಚನೆ ಮಾಡದೆ ಇರುವುದು ಚಿಂತೆಗೀಡುಮಾಡಿದೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಇದ್ದು, ಈ ಬಗ್ಗೆ ಯೋಚನೆ ಮಾಡಬೇಕು. ಪಕ್ಷದ ಭವಿಷ್ಯ ಅಪಾಯದಲ್ಲಿದ್ದು, ದೆಹಲಿ ಫಲಿತಾಂಶ ಹಿರಿಯ ನಾಯಕರಿಗೆ ಸಂದೇಶವಾಗಬೇಕು ಎಂಬುದು ನನ್ನ ಆಗ್ರಹ ಎಂದು ಹ್ಯಾರಿಸ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Leave a Comment