ಸೋಲಾಪುರ-ಹಾಸನ ರೈಲು ಕಲಬುರಗಿಯಿಂದ ಓಡಿಸಲು ಒತ್ತಾಯ

 

ಕಲಬುರಗಿ,ಮೇ.31-ಸೋಲಾಪುರ-ಹಾಸನ ರೈಲನ್ನು ಕಲಬುರಗಿಯಿಂದ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ನಿಯೋಗ ಸೋಲಾಪುರ ರೈಲ್ವೆ ಡಿವಿಜನಲ್ ಮ್ಯಾನೇಜರ್ ಅವರನ್ನು ಒತ್ತಾಯಿಸಿದೆ.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಮುಖಂಡರಾದ ಮನೀಷ್ ಜಾಜು, ಜ್ಞಾನಮಿತ್ರ ಶಾಮಲೆಲ್, ಶಿವಲಿಂಗಪ್ಪ ಭಂ‌ಡಕ, ಮಹ್ಮದ್ ಮಿರಾಜುದ್ದೀನ್ ಅವರನ್ನೊಳಗೊಂಡ ನಿಯೋಗ ಸೋಲಾಪುರ ರೈಲ್ವೆ ಡಿವಿಜನಲ್ ಮ್ಯಾನೇಜರ್ ಅವರನ್ನು ಭೇಟಿಯಾಗಿ ಮನವಿಪತ್ರ ಸಲ್ಲಿಸಿ ಈ ಒತ್ತಾಯವನ್ನು ಮಾಡಿದೆ.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ರಾಜಧಾನಿ ಬೆಂಗಳೂರಿಗೆ ಸುಗಮವಾಗಿ ಸಂಚರಿಸಲು ಕಲ್ಯಾಣ ಕರ್ನಾಟಕದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೋಲಾಪುರ ಹಾಸನ ಎಕ್ಸಪ್ರೆಸ್ ರೈಲನ್ನು ಕಲಬುರಗಿಯಿಂದ ಓಡಿಸುವದು ಅತಿ ಅವಶ್ಯವಾಗಿದೆ ಎಂದು ತಿಳಿಸಿದೆ.

ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶದ ಬಹುತೇಕ ರೈಲುಗಳು  ಸ್ಥಗಿತವಾಗಿದ್ದು, ಪ್ರಸ್ತುತ ಆಯಾ ರಾಜ್ಯಗಳ ಕೊರೊನಾ ವೈರಸ್ ಹರಡುವಿಕೆಯ ಸ್ಥಿತಿಗತಿಯ ಆಧಾರದ ಮೇಲೆ ರೈಲ್ವೆ ಮಂತ್ರಾಲಯ ಆಯಾ ಪ್ರದೇಶಗಳ ಜನರ ಬೇಡಿಕೆ ಹಾಗೂ ರಾಜ್ಯ ಸರ್ಕಾರಗಳ ಸಹಮತಿಯಂತೆ ಜೂನ 1ರಿಂದ ಸುಮಾರು 100 ರೈಲುಗಳು ಆರಂಭಿಸುತ್ತಿದೆ. ಕಲಬುರಗಿ ಮಾರ್ಗವಾಗಿ ಮುಂಬೈಯಿಂದ ಬೆಂಗಳೂರಿಗೆ ಉದ್ಯಾನ ಎಕ್ಸಪ್ರೆಸ್ ಮಾತ್ರ ಚಲಿಸುವುದರಿಂದ ಈ ಭಾಗದ ಜನರಿಗೆ ಅದರಲ್ಲೂ ಮಧ್ಯಮವರ್ಗ ಮತ್ತು ಸಾಮಾನ್ಯ ಜನರಿಗೆ ಇದು ಸಮರ್ಪಕವಾಗಿ ಅನುಕೂಲವಾಗುವದಿಲ್ಲ. ಈ ಪ್ರಯುಕ್ತ  ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜನ ಸಾಮಾನ್ಯರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ರಾಜಧಾನಿ ಬೆಂಗಳೂರಿಗೆ ವ್ಯವಸ್ಥಿತ  ಪ್ರವಾಸಕ್ಕೆ  ಅನುಕೂಲವಾಗಲು,ಸೋಲಾಪುರ ಹಾಸನ ಎಕ್ಸ್ ಪ್ರೆಸ್ ರೈಲು ಕಲಬುರಗಿಯಿಂದ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

Share

Leave a Comment