ಸೋಮಾರಿ ಸರ್ಕಾರ : ಬಿಜೆಪಿ ಪ್ರಹಾರ

ಕಲಬುರಗಿ,ಫೆ.17-ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸೋಮಾರಿ, ಅಭಿವೃದ್ಧಿಹೀನ ಮತ್ತು ನಿದ್ರೆಯಲ್ಲಿರುವ ಸರ್ಕಾರ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ರವಿ ಕುಮಾರ ಟೀಕಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವಾದದ ಹಿನ್ನೆಲೆಯಲ್ಲಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ನೀಡುತ್ತಾರೆ ಎಂಬ ನಂಬಿಕೆ ಇತ್ತು. ಭ್ರಷ್ಟಾಚಾರದಲ್ಲಿ ಮುಳುಗುವುದರ ಮೂಲಕ ಸಾಮಾಜಿಕವಾಗಿ ಅನ್ಯಾಯಮಾಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿಲ್ಲ, ಮೇವಿನ ಕೊರತೆಯಿಂದ ಜಾನುವಾರು ಬಡಕಲಾಗಿ ರೈತರು ಕಸಾಯಿ ಖಾನೆಗಳಿಗೆ ಕಳುಹಿಸುತ್ತಿದ್ದರೂ ಈ ಸರ್ಕಾರಕ್ಕೆ ಕರುಣೆ ಬರುತ್ತಿಲ್ಲ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದ್ದರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಪಡಿತರ ಆಹಾರ ಧಾನ್ಯ ವಿತರಣೆಗೆ ಕೇಂದ್ರ ಶೇ.97 ರಷ್ಟು ಹಣ ನೀಡುತ್ತಿದೆ. ಅದರಲ್ಲಿ ರಾಜ್ಯದ ಪಾಲು ಶೇ.3 ರಷ್ಟು ಮಾತ್ರ ಆದರೂ ರಾಜ್ಯದ ಬಡಜನತೆಗೆ ಸರಿಯಾದ ರೀತಿಯಲ್ಲಿ ಪಡಿತರ ಆಹಾರ ಧಾನ್ಯ ಪೂರೈಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಬಡ ಜನರಿಗೆಂದು ನೀಡಿದ ಬಿಪಿಎಲ್ ಎಲ್.ಇ.ಡಿ. ಬಲ್ಬ್ ಗಳನ್ನು ವಿತರಿಸದೆ ಮಾರಿಕೊಂಡು ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದೆ ಎಂದು ಆರೋಪಿಸಿದರು.
ದೇಶದಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೂ ಕಾಂಗ್ರೆಸ್ ವೀಕಾಗಿದ್ದು, ಭ್ರಷ್ಟಾಚಾರದಲ್ಲಿ ತೊಡಗುವುದರ ಮೂಲಕ ಸಿದ್ದರಾಮಯ್ಯನವರು ಮಾತ್ರ ಬಲಿಷ್ಠವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಬಿಜೆಪಿ ಬೀದರ್ ಜಿಲ್ಲೆಯಿಂದ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.


ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ
ರಾಜ್ಯದ ಬೀದರ್ ಜಿಲ್ಲೆಯಿಂದ ಹಿಂದುಳಿದ ವರ್ಗಗಳ ಸಮಾವೇಶ ಆರಂಭಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ರವಿಕುಮಾರ ತಿಳಿಸಿದರು.
ಫೆ.22 ರಂದು ಬೀದರ್ ನಲ್ಲಿ ಸಮಾವೇಶ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ಪ್ರಮುಖಕರು ಮತ್ತು ಹೈ-ಕ ಭಾಗದ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
23 ರಂದು ಯಾದಗಿರಿಯಲ್ಲಿ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.


Leave a Comment