ವಿಧಾನಮಂಡಲ ಅಧಿವೇಶನ: ತಂತ್ರಗಾರಿಕೆ ರೂಪಿಸಲು ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು, ಫೆ.16- ಫೆಬ್ರವರಿ 17 ರಂದು ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ಹೆಣೆಯಲು ಇಂದು ಸಂಜೆ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸಂಜೆ 5 ಕ್ಕೆ ವಿಪಕ್ಷ ಹಾಗೂ ಶಾಸಕಾಂಗ ಪಕ್ಷ‌ದ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಯಾವ ರೀತಿಯಲ್ಲಿ ಚರ್ಚೆಗಳಲ್ಲಿ ಯಾರು ಭಾಗಿಯಾಗಬೇಕು ಹಾಗೂ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.
ಬೀದರ್ ಶಾಹೀನ್ ಪ್ರಕರಣ, ಮಂಗಳೂರು ಗೋಲಿಬಾರ್, ಮೈಸೂರು ಕಾಶ್ಮೀರ ಘಟನೆ, ಆರ್ಥಿಕ ಪರಿಸ್ಥಿತಿ, ನೆರೆ ಸಂತ್ರಸ್ತರು, ಸಿಎಎ ಪ್ರತಿಭಟನೆಗೆ ಅವಕಾಶ ನಿರಾಕರಣೆ ಸೇರಿದಂತೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಲು ನಿರ್ಧರಿಸಲಾಗಿದೆ.
ಪ್ರವಾಹ ಪರಿಹಾರ ವಿಳಂಬ, ಅಭಿವೃದ್ದಿ ಕಾರ್ಯಗಳಲ್ಲಿ ಹಿನ್ನಡೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

Leave a Comment