ಸೋನಿಯಾ, ದಿನೇಶ್ ಮಹತ್ವದ ಚರ್ಚೆ

ನವದೆಹಲಿ, ಫೆ. ೨೦- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಮಹತ್ವದ ಮಾತುಕತೆ ನಡೆಸಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಗಳು ಆರಂಭವಾಗಿರುವ ಬೆನ್ನಲ್ಲೇ ಪಕ್ಷದ ಹೈಕಮಾಂಡ್, ರಾಜ್ಯದ ವಿವಿಧ ನಾಯಕರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ನಿನ್ನೆಯಷ್ಟೇ ಸೋನಿಯಾ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದರು. ಮುಖಂಡರಾದ ಭಕ್ತ ಚರಣ್ ದಾಸ್ ಹಾಗೂ ಮದುಸೂಧನ್ ಮಿಸ್ತ್ರಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸುವಂತೆ ಮುನಿಯಪ್ಪ ಒತ್ತಡ ಹೇರಿದ್ದರು.
ಈ ವರದಿ ಅನುಸಾರ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯ ಅವರ ಬಳಿಯೇ ಉಳಿಸಿ, ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಬೇರ್ಪಡಿಸಿ, ಆ ಸ್ಥಾನವನ್ನು ಬೇರೊಬ್ಬರಿಗೆ ನೀಡಬೇಕೆಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಹುದ್ದೆಗಳನ್ನು ಬೇರ್ಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಜೊತೆ ಹೈಕಮಾಂಡ್ ಚರ್ಚೆಗೆ ಮುಂದಾಗಿದೆ.
ನಿನ್ನೆಯಷ್ಟೇ ಮುನಿಯಪ್ಪ ಭೇಟಿಮಾಡಿದ ನಂತರ, ದಿನೇಶ್ ಗುಂಡೂರಾವ್ ಅವರಿಗೆ ಅವಕಾಶ ಕಲ್ಪಿಸಿದೆ. ಅದೇ ರೀತಿ ಮುಖಂಡರಾದ ಪರಮೇಶ್ವರ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ನಡುವೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಪಕ್ಷ ನಾಯಕರ ಗೊಂದಲ ನಿವಾರಣೆಗಳ ಜೊತೆಗೆ ನೂತನ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಕ್ರಿಯೆಯೂ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Leave a Comment