ಸೋನಿಯಾಗೆ ಪತ್ರ ಬರೆದಿಲ್ಲ: ಪರಮೇಶ್ವರ್

ಬೆಂಗಳೂರು, ಜ. ೨೦- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಾವು ಯಾವುದೇ ಪತ್ರ ಅಥವಾ ಇ-ಮೇಲ್ ಕಳುಹಿಸಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಲಾಗಿತ್ತು. ಆ ಸಭೆಯ ವಿವರಗಳನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇನೆ ಅಷ್ಟೇ ಕಾಂಗ್ರೆಸ್ ಅಧ್ಯಕ್ಷರಿಗೆ ಇ-ಮೇಲ್ ಆಗಲಿ, ಪತ್ರವನ್ನು ಆಗಲಿ ರವಾನಿಸಿಲ್ಲ ಎಂದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲವಿರುವುದು ನಿಜ. ಆದಷ್ಟು ಬೇಗ ನೇಮಕಮಾಡಿದರೆ ಒಳ್ಳೆಯದು. ಈಗಿನ ಅಧ್ಯಕ್ಷ ದಿನೇಶ್ ಗುಂಡೂರಾವ್ ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿದ್ದಾರೆ. ಮಾಧ್ಯಮದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ಹೆಸರುಗಳು ಓಡಾಡುತ್ತಿವೆ. ತಡಮಾಡುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.
ಪಕ್ಷಕ್ಕೆ ನಾಲ್ವರು ಕಾರ್ಯಾಧ್ಯಕ್ಷರು ಬೇಕು ಎಂಬುದು ಸರಿಯಲ್ಲ. ಒಬ್ಬ ಅಧ್ಯಕ್ಷ ಸಾಕು. ಕಾರ್ಯಾಧ್ಯಕ್ಷರು ಬೇಕಾಗಿಲ್ಲ. ನನ್ನ ದೃಷ್ಟಿಯಿಂದ ಒಂದು ಉಪಾಧ್ಯಕ್ಷ ಹುದ್ದೆಯೂ ಬೇಕಾಗಿಲ್ಲ. ಇವೆಲ್ಲಾ ಮಾಡಿದರೆ, ಪಕ್ಷದಲ್ಲಿ ಗುಂಪುಗಾರಿಕೆ ಸೃಷ್ಟಿಯಾಗುತ್ತದೆ ಎಂದರು.
ತಮ್ಮ ನಿವಾಸದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಕೂಡ ನಾನು ಇದೆ ಮಾತುಗಳನ್ನು ಹೇಳಿದ್ದೇನೆ. ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರ ನೇಮಕ ಆಗಬೇಕು ಎಂದು ಪರಮೇಶ್ವರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಪಕ್ಷದ ವರಿಷ್ಠರು ತಮ್ಮನ್ನು ದೆಹಲಿಗೆ ಕರೆದು ಆಭಿಪ್ರಾಯ ಕೇಳುತ್ತಾರೆ ಅಂದು ಕೊಂಡಿದ್ದೆ ಅದು ಆಗಿಲಿಲ್ಲ ಎಂದರು.
ಸಿಎಲ್‌ಪಿ ಮತ್ತು ವಿಪಕ್ಷ ನಾಯಕ ಬೇರೆ- ಬೇರೆ
ವಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬೇರೆ -ಬೇರೆಯಾಗಬೇಕು. ಪಕ್ಷದ ಹಿತದೃಷ್ಟಿಯಿಂದ ಸಿಎಲ್‌ಪಿ, ಎಲ್‌ಒಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಮಹಾರಾಷ್ಟ್ರದಲ್ಲೂ ಈ ರೀತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಸಿಎಲ್‌ಪಿ ಮತ್ತು ಎಲ್‌ಒಪಿ ಎರಡೂ ಪ್ರತ್ಯೇಕವಾಗಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನು ಹಂಚಿಕೊಂಡರೆ ಅದು ಗುಂಪುಗಾರಿಕೆ ಏನು ಅಲ್ಲ ಎಂದರು.
ಸಿಎಲ್‌ಪಿ ಮತ್ತು ಎಲ್‌ಒಪಿ ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡುತ್ತೇನೆ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯ ಅವರದ್ದೇ ಆದ ಕಾರಣಗಳಿರಬಹುದು ಎಂದರು.

Leave a Comment