ಸೋತವರಿಗೆ ಸಚಿವ ಸ್ಥಾನ ರೇಣುಕಾಚಾರ್ಯ ವಿರೋಧ

(ನಮ್ಮ ಪ್ರತಿನಿಧಿಯಿಂದ)
ತುಮಕೂರು, ಆ. ೨೩- ಚುನಾವಣೆಯಲ್ಲಿ ಸೋತವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಮಂತ್ರಿ ಸ್ಥಾನ ನೀಡಿರುವುದು ಬೇಸರದ ಸಂಗತಿ. ಸಹಜವಾಗಿಯೇ ಈ ಬಗ್ಗ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಗೆ ಅಸಮಾಧಾನ ಇದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣಕರ್ತರಾಗಿರುವ ಅನರ್ಹ ಶಾಸಕರನ್ನು ಕೂಡ ಗೌರವವಾಗಿ ನಡೆಸಿಕೊಳ್ಳಬೇಕು ಎಂದು ನಾನು ಹೇಳಿರುವುದು ಸತ್ಯ ಎಂದರು.
ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಆರೋಗ್ಯಕರ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪನವರು ಸಹ ನನ್ನನ್ನು ನಮ್ಮ ಮನೆ ಮಗ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರಿಂದ ರೇಣುಕಾಚಾರ್ಯರಿಗೆ ಛೀಮಾರಿ ಎಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಇದ್ಯಾವುದೂ ಸಹ ನಡೆದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರಾಗಿರುವ ಲಕ್ಷ್ಮಣ್ ಸವದಿ ಮತ್ತು ನಾನು ಉತ್ತಮ ಸ್ನೇಹಿತರು. ಆದರೆ ಈ ಸಮಯದಲ್ಲಿ ಅವರಿಗೆ ಮಂತ್ರಿಗಿರಿ ನೀಡಿರುವುದು ತಪ್ಪು ಎನ್ನುವುದು ನನ್ನ ಭಾವನೆ ಎಂದರು. ‌
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಯಡಿಯೂರಪ್ಪನವರು ಧರ್ಮವನ್ನು ನಂಬಿದವರು, ನಾಡಿನ ಮಠಾಧೀಶರು ಹಾಗೂ ಜನರ ಆಶೀರ್ವಾದ ಅವರಿಗಿದೆ ಎಂದರು.
ಯಡಿಯೂರಪ್ಪ ನವರು ಅಧಿಕಾರಕ್ಕೆ ಬಂದರೆ ಸಮೃದ್ದಿ ಮಳೆಯಾಗುತ್ತದೆ ಎಂದು ಗ್ರಾಮೀಣ ಭಾಗದಲ್ಲಿ ಜನ ಮಾತನಾಡುತ್ತಾರೆ. ಯಡಿಯೂರಪ್ಪನವರು ಮೂರು ವರ್ಷ ಹತ್ತು ತಿಂಗಳು ಆಡಳಿತ ನೀಡಲಿ. ಅವರ ಆರೋಗ್ಯ ಚೆನ್ನಾಗಿರಲಿ. ಮತ್ತೆ ಅವರು 2023ಕ್ಕೆ ಮುಖ್ಯಮಂತ್ರಿಯಾಗಬೇಕು ಎಂದರು.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಇದ್ದರು. 21ನೇ ಶತಮಾನದಲ್ಲಿ ಯಡಿಯೂರಪ್ಪ ಇದ್ದಾರೆ. ಅವರು ಆಧುನಿಕ ಬಸವಣ್ಣನವರು ಎಂದು ಹಾಡಿ ಹೊಗಳಿದರು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಗುರಿಯಿತ್ತು. ಕುಮಾರಸ್ವಾಮಿಯನ್ನು ಕೆಳಗಿಳಿಸಿ ಒಬ್ಬ ರೈತ ನಾಯಕನನ್ನು ಸಿಎಂ ಮಾಡಲಾಗಿದೆ ಎಂದ ಅವರು, ನಾನ್ಯಾಕೆ ಕುಮಾರಸ್ವಾಮಿ ಅವರ ಮನೆಗೆ ಹೋಗಲಿ. ಯಡಿಯೂರಪ್ಪ ನವರೇ ನಮ್ಮ ನಾಯಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Comment