‘ಸೈಬರ್ ಕ್ರೈಮ್ ಪೊಲೀಸರಿಗೆ ಸವಾಲು’

ಮಂಗಳೂರು, ಆ.೪- ನಗರದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಹಾವಳಿ ಹೆಚ್ಚುತ್ತಿದೆ. ಇದಕ್ಕೆ ವಿದ್ಯಾವಂತರು, ವಿಐಪಿಗಳನ್ನು ಸೈಬರ್ ದಾಳಿಕೋರರು ಗುರಿಯಾಗಿರಿಸಿಕೊಂಡಿದ್ದಾರೆ. ಇಂತಹ ಅಪರಾಧ ಸಂಭವಿಸಲು ಜನರು ಜಾಗೃತಿ ಹೊಂದಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಕರೆ ನೀಡಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿನ್ನೆ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೋನ್ ಕರೆ ಮಾಡುವ ಮೂಲಕ ಖಾತೆಗಳ ನಂಬರ್, ಒಟಿಪಿ, ಎಟಿಎಂ ನಂಬರ್‌ಗಳನ್ನು ನಾಜೂಕಾಗಿ ಪಡೆಯುತ್ತಾರೆ. ಸ್ವಲ್ಪ ಯಾಮಾರಿದರೂ ಕನ್ನ ಹಾಕುಲು ಸಿದ್ಧರಾಗಿರುತ್ತಾರೆ. ಇಂತಹ ಅಪರಾಧಗಳ ವಿರುದ್ಧ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು. ಸೈಬರ್ ಕ್ರೈಂ ನಡೆಸುವವರು ನಕಲಿ ಖಾತೆಗಳನ್ನು ಹೊಂದಿ, ತಮ್ಮ ಖಾತೆಗಳಿಗೆ ಹಣ ಜಮೆ ಮಾಡಿಕೊಂಡು ಬಳಿಕ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳನ್ನು ಮಟ್ಟಹಾಕಲು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕರು ಸಹಜರಿಸಬೇಕು ಎಂದರು. ನಗರದ ಬಹುತೇಕ ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡುತ್ತಿಲ್ಲ, ಕೇಳಿದರೂ ಕೊಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದು, ತಕ್ಷಣದಿಂದಲೇ ಅಂತಹ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಲು ಟಿ.ಆರ್.ಸುರೇಶ್ ಸೂಚನೆ ನೀಡಿದರು.ಸಾರ್ವಜನಿಕ ಅಹವಾಲಿಗೆ ಪ್ರತಿಕ್ರಿಯಿಸಿದ ಅವರು ಹಲವು ತಿಂಗಳುಗಳಿಂದ ಟಿಕೆಟ್ ನೀಡದಿರುವ ಕುರಿತು ದೂರು ಬಂದಿವೆ. ತಕ್ಷಣದಿಂದಲೇ ಬಸ್‌ಗಳ ತಪಾಸಣೆ ಮಾಡಬೇಕು. ಟಿಕೆಟ್ ನೀಡುತ್ತಿಲ್ಲ ಎನ್ನುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು. ಬಸ್‌ಗಳ ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಬೇಕು ಎಂದು ಆಯುಕ್ತರು ಖಾಸಗಿ ಬಸ್‌ಗಳ ಬಹುತೇಕ ನಿರ್ವಾಹಕರು ಪರವಾನಿಗೆಯನ್ನು ಹೊಂದಿಲ್ಲ ಎಂಬ ಮಾಹಿತಿ ಇದೆ. ಕಾರ್ಯಾಚರಣೆ ಮೂಲಕ ಪ್ರಕರಣ ದಾಖಲಿಸಬೇಕು. ಬಸ್‌ಗಳನ್ನು ಕನಿಷ್ಠ ಎರಡು-ಮೂರು ಗಂಟೆಗಳ ಕಾಲ ತಡೆಹಿಡಿಯಬೇಕು ಎಂದು ಸಂಚಾರ ವಿಭಾಗದ ಡಿಸಿಪಿ, ಎಸಿಪಿಗಳಿಗೆ ಸೂಚನೆ ನೀಡಿದರು. ಒಂದೇ ಸಮಯದಲ್ಲಿ ವಿವಿಧ ರಸ್ತೆಗಳಲ್ಲಿ ಬಸ್‌ಗಳನ್ನು ತಡೆಯಬೇಕು. ತಪಾಸಣೆ ವೇಳೆ ಪ್ರಯಾಣಿಕರಿಗೂ ಟಿಕೆಟ್ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಬೇಕು. ಖಾಸಗಿ ಬಸ್‌ಗಳನ್ನು ಅತಿವೇಗದಲ್ಲಿ ಚಲಾಯಿಸಲಾಗುತ್ತಿದೆ ಎನ್ನುವ ದೂರುಗಳು ಬಂದಿದ್ದು, ಅಂತಹ ಘಟನೆ ಬೆಳಕಿಗೆ ಬಂದರೆ ಬಸ್ ಜಪ್ತಿ ಮಾಡಬೇಕು. ಹೀಗಾದಲ್ಲಿ ಮಾತ್ರ ಸುರಕ್ಷಿತ ಪ್ರಯಾಣವನ್ನು ಪಡೆಯಬಹುದು. ಸುರಕ್ಷಿತ ಪ್ರಯಾಣ ಎಲ್ಲರ ಆದ್ಯತೆಯಾಗಿದೆ ಎಂದು ಟಿ.ಆರ್. ಸುರೇಶ್ ಹೇಳಿದರು.
ನಗರದ ಶಿವಭಾಗ್, ಕೆಎಫ್‌ಸಿ ಭಾಗದಲ್ಲಿ ಹೆಚ್ಚು ವೇಗದಲ್ಲಿ ಬಸ್‌ಗಳನ್ನು ಚಲಾಯಿಸಲಾಗುತ್ತಿದೆ. ವಿದ್ಯಾರ್ಥಿಗಳು, ವೃದ್ಧರು, ಸಾರ್ವಜನಿಕರು ನಡೆದುಕೊಂಡು ಹೋಗಲು ಭಯಪಡುವಂತಾಗಿದೆ. ಇನ್ನು ಹಲವಾರು ಬಸ್‌ಗಳಲ್ಲಿ ಟಿಕೆಟ್‌ಗಳನ್ನು ಕೊಡುತ್ತಿಲ್ಲ ಎಂದು ಶಕ್ತಿನಗರದ ರಾಜಾರಾಮ್ ದೂರಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಅಂತಹ ಬಸ್‌ಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಹೇಳಿದರು. ಮನಪಾ ಕಚೇರಿಯಲ್ಲಿ ಮೇಯರ್, ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ತಮ್ಮ ಕಾರುಗಳನ್ನು ಮುಖ್ಯದ್ವಾರದಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಅಂಗವಿಕಲರು, ವೃದ್ಧರು, ಸಾರ್ವಜನಿಕಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಸರಕಾರಿ ಅಧಿಕಾರಿಗಳೇ ಹೀಗೆ ನಿರ್ಲಕ್ಷ ವಹಿಸಿದರೆ ಇನ್ನೂ ಜನಸಾಮಾನ್ಯರ ಗತಿ ಏನು ಎಂದು ಬಲ್ಮಠದ ಐವನ್ ಪ್ರಶ್ನಿಸಿದರು. ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಟಿ.ಆರ್.ಸುರೇಶ್ ತಿಳಿಸಿದರು. ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಿರುವ ಸೀಟುಗಳನ್ನು ಹುಡುಗಿಯರು ಆಕ್ರಮಿಸಿಕೊಂಡಿರುತ್ತಾರೆ ಮೂಡುಬಿದಿರೆಯ ಬಾಲಕೃಷ್ಣ ಆರೋಪಿಸಿದರು. ಬಜ್ಪೆ ವ್ಯಾಪ್ತಿಯಲ್ಲಿ ಬಸ್‌ಗಳಿಂದ ವಿಪರೀತ ಹಾರ್ನ್ ಬಳಸುತ್ತಿರುವುದು, ಕೊಟ್ಟಾರಚೌಕಿಯಲ್ಲಿ ಬೀದಿದೀಪ ಉರಿಯದಿರುವುದು, ತೊಕ್ಕೊಟ್ಟು ರಸ್ತೆಯ ಇಕ್ಕೆಲ ಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದು, ಮಲ್ಲಿಕಟ್ಟೆಯಲ್ಲಿ ರಸ್ತೆಗಳಿಗೆ ಹಂಪ್ಸ್ ಹಾಕುವುದು, ಸುಭಾಷ್‌ನಗರದ ಕಾಲೇಜೊಂದರ ಪಕ್ಕದ ಬಿಲ್ಡಿಂಗ್‌ನಿಂದಶೌಚಾಲಯದ ನೀರು ಓವರ್ ಫ್ಲೋ ಆಗುತ್ತಿರುವ ಕುರಿತು ದೂರುಗಳು ಬಂದವು. ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಅಮಾನುಲ್ಲಾ ಎ., ನಾಗೇಶ್‌ಬಂಗೇರಾ, ಪುರುಷೋತ್ತಮ ಮತ್ತಿತರರಿದ್ದರು.

Leave a Comment