ಸೈನಿಕ ವಿರೋಧಿ ಲೇಖನ: ಬರಹ ಕೈಬಿಡದಿದ್ದರೆ ಉಗ್ರ ಹೋರಾಟ

ಪುತ್ತೂರು, ಆ. ೧೩- ಮಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ಬಿಸಿಎ ಕನ್ನಡ ಪಠ್ಯಪುಸ್ತಕದಲ್ಲಿ ಸೈನಿಕರ ಅವಹೇಳನ ಮಾಡಲಾಗಿದೆ. ನಮ್ಮ ದೇಶಪ್ರೇಮವನ್ನೇ ಪ್ರಶ್ನೆ ಮಾಡುವ ಲೇಖನವನ್ನು ಅಳವಡಿಸಲಾಗಿದೆ. ಈ ಲೇಖನವನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಿನ್ನೆಪುತ್ತೂರಿನ ನೆಹರು ನಗರದಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಕಮೀಶನರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಥಮ ವರ್ಷದ ಬಿಸಿಎ ಕನ್ನಡ ಪಾಠದಲ್ಲಿ ಯುದ್ದ ಒಂದು ಉದ್ಯಮ ಎಂಬ ಲೇಖನವನ್ನು ಪಠ್ಯವಾಗಿ ಅಳವಡಿಸಲಾಗಿದೆ. ಈ ಬರಹ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಸೂಕ್ತವಲ್ಲ, ಹೀಗಾಗಿ ತಕ್ಷಣವೇ ಈ ಪಾಠವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಎಬಿವಿಪಿ ಮುಖಂಡ ಸಂದೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ದೇಶಪ್ರೇಮದ ಬಗ್ಗೆ ತಿಳಿಸುವ ಪಾಠಬೇಕಾಗಿತ್ತು, ಅದರ ಬದಲಾಗಿ ಲೇಖಕರು ದೇಶಪ್ರೇಮವನ್ನು ಉದ್ಯಮ ಎಂದಿದ್ದಾರೆ. ಸೈನಿಕರ ಮೇಲೆ ಅಪನಂಬಿಕೆ ಮೂಡಿಸುವಂತೆ ಮಾಡಿರುವುದು ಸರಿಯಲ್ಲ. ಹೀಗಾಗಿ ಈ ಪಾಠ ವಿದ್ಯಾರ್ಥಿಗಳಿಗೆ ಬೇಡ ಎಂದರು.
ಎಬಿವಿಪಿ ಮುಖಂಡ ವಿಜೇತ್ ಮಾತನಾಡಿ, ಭಾರತವು ಎಂದೂ ಸೈನಿಕರ ಬಗ್ಗೆ ಯಾವತ್ತೂ ಕೀಳಾಗಿ ಕಂಡಿಲ್ಲ, ಸೈನಿಕರ ಮನೆಯವರನ್ನೂ ಗೌರವದಿಂದ ಕಾಣುತ್ತದೆ. ಆದರೆ ಈ ಲೇಖಕರ ಬರಹವೇ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುತ್ತದೆ. ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಬೇಜಾವಾಬ್ದಾರಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಕಾಯುವ ಸೈನಿಕರು ಅತ್ಯಾಚಾರಿಗಳು ಎಂಬ ಭಾವನೆ ಬರುತ್ತದೆ. ಹೀಗಾಗಿ ತಕ್ಷಣವೇ ಈ ಪಾಠವನ್ನು ಕೈಬಿಡಬೇಕು. ಒಂದು ವೇಳೆ ಈ ಪಾಠವನ್ನು ತೆಗೆಯದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭ ಎಬಿವಿಪಿ ಪ್ರಮುಖರಾದ ರಾಧೇಶ್, ಲಕ್ಷ್ಮೀಶ, ಹೃಷಿಕೇಶ್ ಶೆಟ್ಟಿ, ಮನೀಶಾ ಹಾಗೂ ಪ್ರಕೃತಿ ಮಾತನಾಡಿದರು. ಶಾಶ್ವತ್ ಕಾರ್ಯಕ್ರಮ ನಿರೂಪಿಸಿದರು.

Leave a Comment