ಸೈನಿಕರ ಮೇಲೆ ನಂಬಿಕೆ ಇರಲಿ: ನಿರ್ಮಲಾ ಸೀತಾರಾಮನ್

ತುಮಕೂರು, ಏ. ೧೫- ಭಯೋತ್ಪಾದಕ ಕೃತ್ಯಗಳಿಗೆ ಭಾರತ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್‌ಸ್ಟ್ರೈಕ್ ಮೂಲಕ ದಿಟ್ಟ ಉತ್ತರ ನೀಡಲಾಗಿದೆ ಎಂದು ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನಗರದ ಎಸ್ಐಟಿಯಲ್ಲಿರುಲ ಬಿರ್ಲಾ ಸಭಾಂಗಣದಲ್ಲಿ ಚಿಂತರ ಚಾವಡಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಭಾರತದ ಬೆಳವಣಿಗೆಯನ್ನು ಜಗತ್ತಿನ ಇತರೆ ರಾಷ್ಟ್ರಗಳು ಭಾರತ ಹೇಗೆ ಬೆಳೆಯುತ್ತಿದೆ ಎಂಬುದನ್ನು ನೋಡುವಂತಾಗಿದೆ ಎಂದರು.

2008ಕ್ಕೂ ಹಿಂದೆ ಸೈನ್ಯಕ್ಕೆ ಯಾವುದೇ ಅಧಿಕಾರ ನೀಡಿರಲಿಲ್ಲ. ಸೈನಿಕರ ಮೇಲೆ ನಂಬಿಕೆ ಇರಿಸಬೇಕು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಅದನ್ನು ಕಳೆದ 5 ವರ್ಷಗಳಲ್ಲಿ ಮಾಡಲಾಗಿದೆ. ಅದರ ಪ್ರತಿಫಲವನ್ನು ಸೇನೆ ದೇಶಕ್ಕೆ ನೀಡಿದೆ. ರಕ್ಷಣಾ ವ್ಯವಸ್ಥೆ ಮೇಲೆ ನಂಬಿಕೆ ಮತ್ತು ಗೌರವ ಹೊಂದಿರಬೇಕು. ಯೋಜನೆಗಳಿಗೆ ಕಿಕ್ ಬ್ಯಾಕ್ ಪಡೆಯುವುದು ಸೇರಿದಂತೆ ಯಾವುದೇ ಭ್ರಷ್ಟಾಚಾರಗಳನ್ನು ಮೋದಿ ಮಾಡಿಲ್ಲ ಎಂದರು.

ನೋಟ್ ಬ್ಯಾನ್ ತಕ್ಷಣದ ಮತ್ತು ದೀರ್ಘಕಾಲದ ಪ್ರತಿಫಲ ನೀಡುತ್ತದೆ. ನೋಟು ಬ್ಯಾನ್‌ಗಿಂತಲೂ ಮುನ್ನ ಶೇ. 80 ರಷ್ಟು ನೇರ ನಗದು ವ್ಯವಹಾರಕ್ಕೆ ದಾಖಲೆಗಳೇ ಇರಲಿಲ್ಲ. ಈಗ ಎಲ್ಲಾ ವ್ಯವಹಾರಗಳು ಪಾರದರ್ಶಕತೆಯಿಂದ ನಡೆಯುತ್ತಿದೆ. ತೆರಿಗೆ ವಂಚನೆ ನಿಯಂತ್ರಿಸಲಾಗಿದೆ ಎಂದರು.

ಕಪ್ಪು ಹಣ ಹೊರತರುವುದಾಗಿ, ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ 2014ರ ಚುನಾವಣೆಗೂ ಮುನ್ನ ಹೇಳಿದ್ದೀರಿ, ಆ ಕಾರ್ಯ ಇನ್ನೂ ಆಗಿಲ್ಲ ಎಂದು ಸಂವಾದದಲ್ಲಿ ಕೇಳಿದ ಪ್ರಶ್ನೆಗೆ, ಕಪ್ಪು ಹಣ ಹೊರ ತರುವ ಕೆಲಸ ಆಗಿದೆ. ತಪ್ಪಿತಸ್ಥರು ಕಾನೂನಿನ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಈ ಯಾವುದೇ ಪ್ರಕರಣಗಳ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು.

ನ್ಯಾಯ ಯೋಜನೆಯನ್ನು ಈಗ ಕೊಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಹೇಳುತ್ತಿದ್ದಾರೆ. ಜನ್‌ಧನ್, ಮುದ್ರಾ, ಉಜ್ವಲ್‌ನಂತಹ ಯೋಜನೆಗಳ ಮೂಲಕ ನಾವು ಜನತಗೆ ಆಗಲೇ ನ್ಯಾಯ ಒದಗಿಸಿದ್ದೇವೆ ಎಂದು ಅವರು ಹೇಳಿದರು.

Leave a Comment