ಸೈನಾ- ಸಿಂಧು ರೋಚಕ ಹಣಾಹಣಿ

ನವದೆಹಲಿ, ಏ ೧೪-ಲಂಡನ್ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹಾಗೂ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಮಧ್ಯೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರೋಚಕ ಹಣಾಹಣಿ ನಡೆಯಲಿದೆ. ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಇಬ್ಬರು ಭಾರತೀಯ ಆಟಗಾರ್ತಿಯರು ಮುಖಾಮುಖಿಯಾಗುತ್ತಿದ್ದಾರೆ.

ಇತ್ತೀಚೆಗಷ್ಟೆ ವಿಶ್ವ ರ್‍ಯಾಂಕಿಂಗ್ ನಲ್ಲಿ ನಂಬರ್ ೧ ಸ್ಥಾನ ಪಡೆದಿರುವ ಕಿಡಂಬಿ ಶ್ರೀಕಾಂತ್ ಕೂಡ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ೨೦೧೦ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದಿದ್ದರು.

ಆದರೆ ಗಾಯದ ಸಮಸ್ಯೆಯಿಂದಾಗಿ ೨೦೧೪ರ ಗೇಮ್ಸ್ ನಲ್ಲಿ ಆಡಿರಲಿಲ್ಲ. ನಾಳೆ ಸೈನಾ ಹಾಗೂ ಸಿಂಧು ನಡುವಣ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಶ್ರೀಕಾಂತ್ ಫೈನಲ್ ಪಂದ್ಯದಲ್ಲಿ ಮಲೇಷಿಯಾದ ಲೀ ಚೊಂಗ್ ವಿ ಜೊತೆ ಸೆಣೆಸಲಿದ್ದಾರೆ. ಒಟ್ಟಿನಲ್ಲಿ ಭಾರತಕ್ಕೆ ಚಿನ್ನ ಬೆಳ್ಳಿ ಪದಕ ಖಚಿತವಾಗಿದೆ.

Leave a Comment