ಸೈಕೋ ಶಂಕ್ರ ಮತ್ತೊಂದು ವಿವಾದ?

ಸೈಕೋ ಶಂಕರ್ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾದಾಗಿನ ಘಟನೆಗಳಿಗೆ ಕಾಲ್ಪನಿಕ ರೂಪ ಕೊಟ್ಟು ಚಿತ್ರ ಮಾಡುತ್ತಿರುವುದರಿಂದ ಚಿತ್ರಕ್ಕೆ ಸೈಕೋ ಶಂಕ್ರ ಎಂದು ಹೆಸರಿಡಲು ಅನುಮತಿ ಪಡೆಯಬೇಕಿಲ್ಲ ಎನ್ನುವುದು ಒಂದಾದರೆ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಯಿಂದ ಈಗಾಗಲೇ ಈ ಹೆಸರನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ ಕೊಲೆ ಮತ್ತು ಅತ್ಯಾಚಾರ ಕುರಿತಂತೆ ಇರುವ ಕಾನೂನನ್ನು ಅಧ್ಯಾಯ ಮಾಡಿದಾಗ ಅತ್ಯಾಚಾರ ಕೊಲೆಗಿಂತ ಘೋರ ಎಂದು ತಮಗನಿಸಿದ್ದನ್ನೇ ಶೀರ್ಷಿಕೆ ಮೇಲ್ಬರಹವಾಗಿ ಬಳಸಿದ್ದೇನೆ ಎನ್ನುವುದು ನಿರ್ದೇಶಕ ಪುನೀತ್ ಆರ್ಯ ವಾದ.

ಆದರೆ ಇದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿದೆ. ಇತ್ತೀಚೆಗೆ ಸಿನೆಮಾದ ಕುರಿತಾಗಿರುವುದಲ್ಲ ಶೀರ್ಷಿಕೆಯದ್ದೇ ಟೀಜರ್‌ನ ಬಿಡುಗಡೆ ಮಾಡಿ ಅಲ್ಲಿಂದಲೇ ಸಿನೆಮಾದ ಪ್ರಚಾರಕ್ಕೆ ಇಳಿದಿದ್ದಾರೆ.

ಅವರ ಪ್ರಕಾರ ಇದೊಂದು ಹೊಸ ಪ್ರಯತ್ನ ೧೯ ಅತ್ಯಾಚಾರವೆಸಗಿದ ಆರೋಪಿ ಶಂಕ್ರ ೪ಬಾರಿ ಜೈಲಿನಿಂದ ತಪ್ಪಿಸಿಕೊಂಡ ಸಮಯದಲ್ಲೇ ಮೈಸೂರು ಮತ್ತು ನಾಗಮಲೆಯಲ್ಲಿ ನಡೆದ ಘಟನೆಗಳನ್ನು ಆಧರಿಸಿ ಚಿತ್ರವಾಗಿಸಿದ್ದಾಗಿ ಹೇಳಿಕೊಂಡ ಪುನೀತ್ ಆರ್ಯ ಜೈಲಿನಲ್ಲಿರುವ ಶಂಕರ್ ನ ಭೇಟಿಯಾಗಿದ್ದಾರೆ.

ಜೊತೆಗೆ ಶಂಕ್ರನಾಗಿ ನಟಿಸುತ್ತಿರುವ ನವರಸನ್‌ನ ಕೂಡ ಕರೆದೊಯ್ದಿದ್ದಾರೆ. ವಿಶೇಷವೆಂದರೆ ನವರಸನ್ ಪಾತ್ರ ಮಾತೇ ಆಡುವುದಿಲ್ಲವಂತೆ. ಪಾತ್ರ ಶಂಕರ್ ನಂತೆ ಆಗಾಗ ಬಟ್ಟೆ ಬದಲಾಯಿಸುತ್ತಿರುತ್ತದಂತೆ.

ನವರಸನ್ ಪ್ರಕಾರ ಇದೊಂದು ಸೈಕೋ ಮತ್ತು ದಂಡುಪಾಳ್ಯ ಚಿತ್ರಕಿಂತ ಚೆನ್ನಾಗಿ ಮೂಡಿ ಬರುತ್ತೆ ಎನ್ನುವುದಾಗಿದೆ. ಇದಕ್ಕೆ ತಕ್ಕಂತೆ ಸಮಾಜಕ್ಕೆ ಉತ್ತಮ ಸಂದೇಶ ಹೇಳಲು ಸೈಕೋ ಶಂಕ್ರನ ಹೇಯ ಅಥವಾ ಕ್ರೌರ್ಯ ಕೃತ್ಯಗಳನ್ನು ತೋರಿಸಬೇಕಾಗುತ್ತದೆ ಎನ್ನುವುದೂ ಪುನೀತ್ ಆರ್ಯ ನಿಲುವು.

ಚಿತ್ರದಲ್ಲಿ ನವರಸನ್  ಅಲ್ಲದೆ ಸೂರ್ಯ, ವಿಜಯ ಚೆಂಡೂರ್, ಪ್ರಣವ್ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯಿಂದ ಪರಿಚಿತವಾಗಿರುವ ಅಮೃತರಾವ್‌ಗೆ ಪುನೀತ್ ಆರ್ಯ ಕಥೆ ಹೇಳುವಾಗಲೇ ದೃಶ್ಯಗಳನ್ನು ಕಲ್ಪಿಸಿಕೊಂಡಾಗ ಅದ್ಭತವಾಗಿದೆ ಎನಿಸಿ ಒಪ್ಪಕೊಂಡಿದ್ದಾರಂತೆ. ಜಿ.ವಿ. ಅಯ್ಯರ್ ತನ್ನ ದೊಡ್ಡತಾತ ಎಂದು ಹೇಳಿಕೊಂಡ ರಿಷಿಕಾ ಡಿಗ್ಲಾಮರಸ್ ಆಗಿ ಸೀರೆಯುಟ್ಟು, ದೊಡ್ಡಬೊಟ್ಟು, ಉದ್ದಜಡೆಯ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುವ ರೋಮಾಂಚನವನ್ನು ಹಂಚಿಕೊಂಡರು.

ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸುತ್ತಿರುವ ಶರತ್ ಲೋಹಿತಾಶ್ವ  ತಮ್ಮ ಪಾತ್ರ ವಿಶಿಷ್ಟವಾಗಿದೆ ಎಂದರಲ್ಲದೆ ಈ ಚಿತ್ರದಿಂದ ಇತ್ತೀಚಿನ ಉತ್ತಮ ನಿರ್ದೇಶಕರ ಸಾಲಿಗೆ ಪುನೀತ್ ಆರ್ಯ ಸೇರುತ್ತಾರೆನ್ನುವುದು ಅವರ ಆಶಯವೂ ಆಗಿದೆ. ಅವರು ಮತ್ತು ಚಿತ್ರದ ನಿರ್ಮಾಪಕ ಎಸ್. ಪ್ರಭಾಕರ್ ಸೇರಿದಂತೆ ಇಡೀ ಚಿತ್ರ ತಂಡ ಸೈಕೋ ಶಂಕ್ರ ಒಂದು ಅದ್ಭುತವಾದ ಸಿನೆಮಾ ಆಗುತ್ತದೆ ಎಂದು ಹೇಳಿದ್ದಾರೆ.

ಆದರೆ ಪುನೀತ್ ಆರ್ಯ ಇಟ್ಟಿರುವ ಶೀರ್ಷಿಕೆ, ಮೇಲ್ಬರಹ ಎಲ್ಲವೂ ಹೊಸ ವಿವಾದ ಹುಟ್ಟು ಹಾಕುವ ಸಾಧ್ಯತೆಗಳಿದೆ ಅಲ್ಲದೆ ವಿವಾದ ಹುಟ್ಟಿಕೊಂಡರೆ ಅದನ್ನು ಎದುರಿಸುತ್ತೇನೆ ಎಂದೂ ಹೇಳಿಕೊಳ್ಳುತ್ತಾರೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ದಂಡುಪಾಳ್ಯವಾಗುತ್ತದೆ ಎನ್ನುವ ಲಕ್ಷಣಗಳಂತು ಕಂಡುಬರುತ್ತಿದೆ.

Leave a Comment