ಸೈಕಲ್ ಬಳಕೆಯಿಂದ ಆರೋಗ್ಯ ವೃದ್ದಿ

ದಾವಣಗೆರೆ, ಜೂ. 19 – ಸೈಕಲ್ ಬಳಕೆಯಿಂದ ಆರೋಗ್ಯ ವೃದ್ದಿಯಾಗುತ್ತದೆ ಹಾಗೂ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು.  ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿಂದು ಜಿಲ್ಲಾಡಳಿತ, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಒತ್ತಡದ ಬದುಕಿನಿಂದ ಆರೋಗ್ಯವು ಹದಗೆಡುತ್ತಿದೆ. ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ನಿತ್ಯವು ಸೈಕಲ್ ಬಳಕೆ ಅವಶ್ಯಕ. ಬಡವರು ಹೊಟ್ಟೆಪಾಡಿಗಾಗಿ ಸೈಕಲ್ ತುಳಿದರೆ ಶ್ರೀಮಂತರು ಹೊಟ್ಟೆ ಕರಗಿಸಿಕೊಳ್ಳುವುದಕ್ಕಾಗಿ ಸೈಕಲ್ ತಿಳಿಯುತ್ತಾರೆ. ವಾಹನಗಳಿಂದ ಬರುವ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತದೆ. ಸೈಕಲ್ ತುಳಿಯುವುದರಿಂದ ಪರಿಸರ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸೈಕಲ್ ಜಾಥವು ಮೋತಿ ವೀರಪ್ಪ ಕಾಲೇಜು ಆವರಣದಿಂದ ಜಿಲ್ಲಾಸ್ಪತ್ರೆ ವಿದ್ಯಾರ್ಥಿಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪ್ರವಾಸ ಮಂದಿರ, ಎವಿಕೆ ಕಾಲೇಜು, ರಾಮ್ ಅಂಡ್ ಕೋ ವೃತ್ತ, ಚರ್ಚ್ ರಸ್ತೆ ಮೂಲಕ ಆರಂಭದ ಸ್ಥಳಕ್ಕೆ ತಲುಪಿತು. ಈ ವೇಳೆ 150 ಕ್ಕೂ ಹೆಚ್ಚು ಮಂದಿ ಸೈಕಲ್ ಜಾಥದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ಪಿ ಭೀಮಾಶಂಕರ್ ಎಸ್ ಗುಳೇದ್, ವಾಸುದೇವರಾಯ್ಕರ್, ಆಯುಷ್ ವೈದ್ಯಾಧಿಕಾರಿ ಸಿದ್ದೇಶ್ ಸೇರಿದಂತೆ ಮತ್ತಿತರರಿದ್ದರು.

 ಸೈಕಲ್ ಸವಾರಿಯಲ್ಲಿ ಡಿಸಿ,ಎಸ್ಪಿ
ವಿಶ್ವಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಿದ್ದ ಸೈಕಲ್ ಜಾಥದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್ ಸೇರಿದಂತೆ ಅನೇಕರು ಇಂಧನ ಉಳಿಸಿ ಆರೋಗ್ಯ ಬೆಳೆಸಿ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್ ಸವಾರಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

Leave a Comment