ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ವಿಫಲ

ಜಮ್ಮು, ಫೆ. ೧೩- ಇಲ್ಲಿನ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ನಡೆಸಲು ಯತ್ನಿಸಿದ ದಾಳಿಯನ್ನು ಸೇನಾ ಪಡೆಗಳು ವಿಫಲಗೊಳಿಸಿದ್ದಾರೆ.
ಮೂರು ದಿನಗಳ ಹಿಂದೆ ಸುಂಜುವಾನ್ ಸೇನಾ ಶಿಬಿರದ ಮೇಲೆ ಜೈಷ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಹತರಾಗಿದ್ದರು. ಇದರ ಬೆನ್ನಲ್ಲೇ ಭಯೋತ್ಪಾದಕರು ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನಾ ಪಡೆ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸಿದೆ.

ಸೇನಾಪಡೆಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಗುಂಡಿನ ದಾಳಿ ನಡೆಸುತ್ತಿದ್ದಂತೆ, ಭಯೋತ್ಪಾದಕ ಪರಾರಿಯಾಗಿದ್ದಾನೆ ಎಂದು ಜಮ್ಮು ನೆಲೆಯ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ. ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಭಯೋತ್ಪಾದಕರು ಜಮ್ಮೂರು – ಅಕ್ನೂರ್ ರಸ್ತೆಯಲ್ಲಿರುವ ಸೇನಾ ಶಿಬಿರದ ಗೇಟ್ ಸಮೀಪ ಇಂದು ಮುಂಜಾನೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಗುಂಡು ಹಾರಿಸಿ, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಸುಂಜುವಾನ್ ಸೇನಾ ಶಿಬಿರದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಸೇನಾ ಪಡೆಗಳು ಯಶಸ್ವಿಯಾಗಿವೆ. ಸತತ 50 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರಗಾಮಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿವೆ.
ಈ ಗುಂಡಿನ ಕಾಳಗದಲ್ಲಿ ಓರ್ವ ನಾಗರಿಕ ಮತ್ತು 6 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಸುಂಜುವಾನ್ ಸೇನಾ ಶಿಬಿರದಲ್ಲಿ ಮತ್ತೊಂದು ಯೋಧನ ಶವ ಪತ್ತೆಯಾಗಿದೆ. ಹತ ಉಗ್ರಗಾಮಿಗಳಿಂದ ಎಕೆ 56 ಬಂದೂಕು ಸೇರಿದಂತೆ, ಭಾರೀ ಪ್ರಮಾಣದ ಸ್ಫೋಟಕ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಉಗ್ರಗಾಮಿಗಳು ನಡೆಸಿರುವ ದಾಳಿ ಕುರಿತು ಸೇನಾಧಿಕಾರಿಗಳೊಂದಿಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಶಿಬಿಗಳಿಗೆ ಹೊಂದಿಕೊಂಡಂತೆ ಮನೆಗಳನ್ನು ನಿರ್ಮಾಣ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಸೇನಾ ಶಿಬಿರಗಳ ಪಕ್ಕದಲ್ಲೇ ಅನುಮತಿ ಪಡೆದುಕೊಂಡೇ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸುವುದು ಕಷ್ಟದ ಕೆಲಸವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

Leave a Comment