ಸೇಡಿನ ಶುದ್ಧಿ

ರೋಚಕ ಕಥಾನಕ,ಥ್ರಿಲ್ಲರ್ ಮತ್ತು ಸೇಡಿನ ಅಂಶಗಳಿಂದ ಕೂಡಿರುವ ’ಶುದ್ಧಿ’ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರಕ್ಕೆ ಆದರ್ಶ ಎಚ್. ಈಶ್ವರಪ್ಪ ಆಕ್ಷನ್ ಕಟ್ ಹೇಳಿದ್ದು, ನಂದಿನಿ ಮಾದೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬಹಳ ದಿನಗಳಿಂದ ತೆರೆಯಿಂದ ಮರೆಗೆ ಸರಿದಿದ್ದ ನಟಿ ನಿವೇದಿತಾ ಶುದ್ಧಿ ಚಿತ್ರದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರವನ್ನು ಗೋವಾ, ಗೋಕರ್ಣ, ಕಾರ್ಕಳ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ವೀಣಾ ಸುಂದರ್, ಶಶಾಂಕ್ ಪುರುಷೋತ್ತಮ್, ಅಜಯ್‌ರಾವ್, ನಾಗಾರ್ಜುನ, ಸಿದ್ದಾರ್ಥ ಸೇರಿದಂತೆ ಮತ್ತಿತರ ತಾರಾಗಣವಿದೆ. ಚಿತ್ರಕ್ಕೆ ಹಾಲಿವುಡ್ ಕ್ಯಾಮರಮನ್ ಕೆಲಸ ಮಾಡಿರುವುದು ಚಿತ್ರದ ಹೆಗ್ಗಳಿಕೆ. ಕಳೆದವಾರ ಚಿತ್ರದ ಟ್ರೈಲರ್ ಬಿಡುಗಡೆ ಇತ್ತು. ಆ ಬಳಿಕ ಚಿತ್ರತಂಡ  ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ, ಚಿತ್ರ ಮೂರು ಟ್ರಾಕ್‌ನಲ್ಲಿ ಸಾಗಲಿದೆ. ಸೇಡು ತೀರಿಸಿಕೊಳ್ಳಲು ಹುಡುಗಿಯೊಬ್ಬಳು ಅಮೇರಿಕಾದಿಂದ ಬರುತ್ತಾಳೆ, ಇಲ್ಲಿ ಬೀದಿ ನಾಟಕಗಳಲ್ಲಿ ತೊಡಗಿರುವ ಇಬ್ಬರು ಹುಡುಗಿಯರು ಕ್ಲೈಮಾಕ್ಸ್ ನಲ್ಲಿ ಒಂದೆಡೆ ಸೇರುತ್ತಾರೆ. ಈ ಮೂರು ಹುಡುಗಿಯರಿಗೆ ಏನು ಸಂಬಂಧ, ಸೇಡು ತೀರಿಸಿಕೊಳ್ಳಲು ವಿದೇಶದಿಂದ ಹುಡುಗಿ ಯಾಕೆ ಬರುತ್ತಾಳೆ ಎನ್ನುವುದು ಚಿತ್ರದ ತಿರುಳು.

ಚಿತ್ರದಲ್ಲಿ ಹಾಡಿಲ್ಲ. ಚಿತ್ರ ನಿರೀಕ್ಷೆಗಿಂತ ಚೆನ್ನಾಗಿ ಮೂಡಿ ಬಂದಿದೆ. ಬಹುತೇಕ ಹೊಸ ಕಲಾವಿದರೇ ಚಿತ್ರದಲ್ಲಿ ಅಧಿಕವಾಗಿದ್ದಾರೆ. ಯಾರೂ ಕೂಡ ಹೊಸಬರು ಅನ್ನಿಸುವುದಿಲ್ಲ ಅಷ್ಟರ ಮಟ್ಟಿಗೆ ನಟಿಸಿದ್ದಾರೆ ಎಂದು ಕಲಾವಿದರ ಬಗ್ಗೆ ಮೆಚ್ಚುಗೆಯ ಮಾತನಾಡಿದ ನಿರ್ದೇಶಕ ಈಶ್ವರಪ್ಪ ಚಿತ್ರವನ್ನು ಸದ್ಯದಲ್ಲಿಯೇ ತೆರೆಗೆ ತರುವ ಆಲೋಚನೆ ಇದೆ ಹೊಸಬರ ಪ್ರಯತ್ನಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ನಿರ್ಮಾಪಕಿ ನಂದಿನಿ ಮಾದೇಶ್, ಒಳ್ಳೆಯ ಚಿತ್ರ ನಿರ್ಮಾಣ ಮಾಡುವ ಹಂಬಲ ಹಲವು ದಿನಗಳಿಂದ ಇತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಹೊಸಬರ ಪ್ರಯತ್ನಕ್ಕೆ ಸಹಕಾರ ಮತ್ತು ಬೆಂಬಲ ಬೇಕು ಎಂದರು.

ನಟಿ ನಿವೇದಿತಾ, ಹೆಣ್ಣಿಗೆ ಸೌಂದರ್ಯವಿರುತ್ತದೆ  ಆದರೆ ಹೆದರಿಸುವ ಶಕ್ತಿ ಇರುವುದಿಲ್ಲ, ಅದೇ ರೀತಿ ಗಂಡಿಗೆ ಬಲವಿರುತ್ತದೆ ತಡೆಯುವ ಸಾಮರ್ಥ್ಯವಿರುವುದಿಲ್ಲ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರೀಕರಣ ಸಮಯದಲ್ಲಿನ ತಮ್ಮ ಅನುಭವ ಹಂಚಿಕೊಂಡರು. ೨೦೧೩ರಲ್ಲಿ ಚಿತ್ರೀಕರಣ ಆರಂಭಿಸಿದ ಚಿತ್ರ ಈಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

Leave a Comment