ಸೆ.9 ಪಿಓಪಿ ಗಣೇಶ ಮೂರ್ತಿ: ಜಾಗೃತಿ ಕಾರ್ಯಕ್ರಮ

ರಾಯಚೂರು.ಸೆ.06- ಪ್ಲಾಸ್ಟರ್ ಆಫ್‌ ಪ್ಯಾರಸ್‌ನಿಂದ ತಯಾರಿಸಿದ ಗಣಪ್ಪನ ಮೂರ್ತಿಯಿಂದ ಜನರ ಮೇಲಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಕಾರ್ಯಗಾರ ಸೆ.9 ರಂದು ಸ್ಥಳೀಯ ಲಕ್ಷ್ಮೀ ನಾರಾಯಣ ರೈಸ್‌ಮಿಲ್‌‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಅಧಿಕಾರಿ ಎಸ್.ಎಂ.ನಟೇಶ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ರಾಯಚೂರು, ಗ್ರೀನ್ ಸಂಸ್ಥೆ ಹಾಗೂ ನವೋದಯ ಶಿಕ್ಷಣ ಸಂಸ್ಥೆಗಳ ಸಮೂಹ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2016 ಜು.20 ರಂದು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಮಾಡಿರುವ ಗಣೇಶನ ಮೂರ್ತಿಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಸ್ಥಳೀಯ ಸಂಸ್ಧೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮಂಡಳಿಯು ಜಲಮೂಲಗಳನ್ನು ಪಿಓ‌ಪಿ ಮೂರ್ತಿಗಳ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯದಿಂದ ಸಂರಕ್ಷಿಸಲು ಈ ಆದೇಶ ಹೊರಡಿಸಲಾಗಿದೆ. ನುರಿತ ಮಣ್ಣಿನ ಮೂರ್ತಿ ತಯಾರಕರಾದ ಸೂಗಣ್ಣ ಬಡಿಗೇರ್ ಅವರು ಭಾಗವಹಿಸಿ, ಜನರಿಗೆ ಮಣ್ಣಿನ ಗಣಪ್ಪನ ತಯಾರಿಕೆಯ ಪ್ರಾತ್ಯಕ್ಷಿಕತೆ ಕುರಿತು ತಿಳಿಯಪಡಿಸಲಿದ್ದಾರೆ. ಪರಿಸರ ಜಾಗೃತಿ ಕಾರ್ಯಕ್ರಮ ಜಲ ಮೂಲಗಳ ಸಂರಕ್ಷಣೆ ಹಿತದೃಷ್ಠಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಗಾರ ಯಶಶ್ವಿಗೊಳಿಸಬೇಕೆಂದು ತಿಳಿದರು.
ರಾಜೇಂದ್ರ ಶಿವಾಳಿ, ಸರಸ್ವತಿ ಕಿಲಕಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment