ಸೆ. 25 ಹಮಾಲಿಗಳ ಮುಷ್ಕರ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೧- ರಾಜ್ಯ ಉಗ್ರಾಣ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರ ಕೂಲಿ ಹೆಚ್ಚಳ ಸೇರಿದಂತೆ ನಿರಂತರವಾಗಿ ಎದುರಿಸುತ್ತಿರುವ ಕಿರುಕುಳಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ, ಸೆ. 25 ರಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.
ಅನಿರ್ಧಿಷ್ಟಾವಧಿ ಮುಷ್ಕರ ಅಂಗವಾಗಿ ಅಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಇದುವರೆವಿಗೂ ನಮ್ಮ ಬೇಡಿಕೆಗಳನ್ನು ಈಡೇರಿಸಲು ಹಲವು ಬಾರಿ ಮನವಿ ಮಾಡಿದ್ದರು. ಸರ್ಕಾರ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆ ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರು ಅನಿವಾರ್ಯವಾಗಿ ಮುಷ್ಕರ ನಡೆಸಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ವರದ ರಾಜೇಂದ್ರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಮುಷ್ಕರ ಸಂಬಂಧ ಸೆ. 1 ರಂದೇ ಕಾನೂನು ಪ್ರಕಾರ ನೋಟಿಸ್ ನೀಡಲಾಗಿದೆ. ನೋಟಿಸ್ ಪರಿಗಣಿಸಿ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಸೆ. 25 ರಂದು ಮುಷ್ಕರ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

Leave a Comment