ಸೆ. 25ರಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ  ಆದೇಶ…

ನವದೆಹಲಿ,ಸೆ,21,ಅಕ್ರಮ ಹಣ ವರ್ಗಾವಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ ಜಾಮೀನು ಅರ್ಜಿಯ ಕುರಿತು ನವದೆಹಲಿ ರೋಸ್ ಅವೆನ್ಯೂ ಕೋರ್ಟ್ ಸೆಪ್ಟಂಬರ್ 25ಕ್ಕೆ ಆದೇಶ ಕಾಯ್ದಿರಿಸಿದೆ.

ಸೆಪ್ಟಂಬರ್ 25 ರಂದು ಮಧ್ಯಾಹ್ನ 3.30ಕ್ಕೆ ಡಿ.ಕೆ ಶಿವಕುಮಾರ್ ಜಾಮೀನು ಕುರಿತು ರೋಸ್ ಅವೆನ್ಯೂ ಕೋರ್ಟ್ ನ ನ್ಯಾಯಾಧೀಶರಾದ ಅಜಯ ಕುಮಾರ್ ಕುಹರ್ ಅವರು ಆದೇಶ ನೀಡಲಿದ್ದಾರೆ. ಇದರಿಂದ ಡಿ.ಕೆ ಶಿವಕುಮಾರ್ ಇನ್ನು ಐದು ದಿನ ತಿಹಾರ್ ಜೈಲಿನಲ್ಲೇ ಕಳೆಯಬೇಕಿದೆ.

ಇಂದು ಜಾಮೀನು ಅರ್ಜಿ ಕುರಿತು ಇಡಿ ಪರ ವಕೀಲ ನಟರಾಜು ವಾದ ಮಂಡಿಸಿದರೇ ಡಿ.ಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ವಾದ ಪ್ರತಿವಾದ ಮುಕ್ತಾಯದ ಬಳಿಕ ಆದೇಶವನ್ನ ಸೆ.25ಕ್ಕೆ ಕೋರ್ಟ್ ಕಾಯ್ದಿರಿಸಿದೆ.

ಇಡಿ ಪರ ವಾದ ಮಂಡಿಸಿದ ನಟರಾಜು ಅವರು, ಶಿವಕುಮಾರ್ ಕಾನೂನುಬಾಹಿರವಾಗಿ  ಆಸ್ತಿ ಗಳಿಸಿದ್ದಾರೆ. ಆದಾಯ ತೆರಿಗೆ ಪಾವತಿಸಿದ್ದಾಗಿ ಹೇಳುತ್ತಾರೆ. ಆದರೆ ಆದಾಯ ತೆರಿಗೆ ಕಾಯ್ದೆಯು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸಕ್ರಮವಾಗಿಸಲು ಅವಕಾಶ ನೀಡುವುದಿಲ್ಲ. ಐಟಿ ಕಾಯ್ದೆ ಅಡಿ ಘೋಷಣೆ ಮಾಡಿದ ಆಸ್ತಿಯನ್ನು ಸಕ್ರಮ ಮಾಡಲಾಗದು. ಅಕ್ರಮ ಹಣಕ್ಕೆ ತೆರಿಗೆ ಕಟ್ಟಿ ಅದನ್ನು ಸಕ್ರಮ ಎಂದು ಬಿಂಬಿಸುವುದು ಸರಿಯಲ್ಲ. ಕಪ್ಪು ಹಣ, ಕಪ್ಪು ಹಣವೇ ಆಗುತ್ತದೆ. ಶಿವಕುಮಾರ್ ಪ್ರಭಾವಿ ವ್ಯಕ್ತಿ.  ಸಾಕ್ಷ್ಯ ನಾಶ ಮಾಡುವ ಎಲ್ಲಾ ಸಾಧ್ಯತೆ ಇದೆ. ಐಟಿ ತನಿಖೆ ವೇಳೆಯೂ ಸಾಕ್ಷ ನಾಶಮಾಡಲಾಗಿದೆ. ಹೀಗಾಗಿ ಇಡಿ ತನಿಖೆಯಲ್ಲೂ ಸಾಕ್ಷ ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಡಿ.ಕೆ ಶಿವಕುಮಾರ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಡಿ.ವಾದ ಪೂರ್ವಾಗ್ರಹ ಪೀಡಿತವಾಗಿದೆ. ಡಿ.ಕೆಶಿ ಅವರನ್ನ 198 ಗಂಟೆಗಳ ವಿಚಾರಣೆ ನಡೆಸಲಾಗಿದೆ. ಪ್ರತಿ ದಿನ 9 ಗಂಟೆ ವಿಚಾರಣೆ ಅಮಾನವೀಯ. ಶಿವಕುಮಾರ್ ಯಾವ ದಾಖಲೆಯನ್ನೂ ಫೋರ್ಜರಿ ಮಾಡಲ್ಲ. ಸಾಕ್ಷ ನಾಶ ಆರೋಪ ಮಾಡುವ ಈಡಿ. ತಾನೇ ಸಾಕ್ಷ ತಿರುಚುವುದು ಸರಿಯಲ್ಲ. ಎಲ್ಲ ದಾಖಲೆಗಳನ್ನು ಇಡಿ.ಜಪ್ತಿ ಮಾಡಿದೆ. ಇನ್ನು ಸಾಕ್ಷ ನಾಶ ಪಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Leave a Comment