ಸೆ.16 ರಿಂದ ವಿಷ್ಣು ರಾಷ್ಟ್ರೀಯ ಉತ್ಸವ

ಬೆಂಗಳೂರು, ಆ.೧- ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ನೆನಪಿನಲ್ಲಿ ಸೆಪ್ಟೆಂಬರ್ 16,17, ಮತ್ತು 18 ರಂದು 3 ದಿನಗಳ ಕಾಲ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವವನ್ನು ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಹಲವು ಗಣ್ಯರು ಭಾಗವಹಿಸಲಿದ್ದು ಉದ್ಘಾಟನೆ ಸಮಾರಂಭಕ್ಕೆ ನಾಡಿನ ಸ್ವಾಮೀಜಿಗಳು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.
ಉತ್ಸವದ ಅಂಗವಾಗಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಹಾಡು ಒಂದನ್ನು ಸಿದ್ದಪಡಿಸಿದ್ದು ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರ ಆದರ್ಶ, ವ್ಯಕ್ತಿತ್ವ, ಸೇರಿದಂತೆ ಹಲವು ವಿಷಯಗಳು ಅಡಕವಾಗಿರಲಿವೆ ಎಂದು ಹಿರಿಯ ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ತಿಳಿಸಿದರು.
ಉತ್ಸವದ ಬಳಿಕವು ಹಾಡು ಜನ ಮಾನಸದಲ್ಲಿ ಉಳಿಯುವಂತೆ ಮಾಡುವ ಉದ್ದೇಶ ನಮ್ಮದು. ನಿರಾಸೆಯಾದ ಮನಸ್ಸಿಗೆ ಸ್ಫೂರ್ತಿ ತುಂಬುವಂತ ಹಾಡು ಇದಾಗಲಿದೆ ಎಂದು ಹೇಳಿದರು.
ನಿರ್ದೇಶಕ ರವಿ ಶ್ರೀವತ್ಸ, 3 ದಿನಗಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಷ್ಣುವರ್ಧನ್ ಅವರೊಂದಿಗೆ ಕೆಲಸ ಮಾಡಿದ ಹಲವು ಕಲಾವಿದರನ್ನು ಒಟ್ಟುಗೂಡಿಸುವ ಕೆಲಸ ಮಾಡಲಾಗುತ್ತದೆ.
ಆದರೆ ಈ ಹಾಡಿನಲ್ಲಿ ಅವರನ್ನು ಬಳಸ ಬೇಕೋ ಅಥವಾ ಬೇಡವೋ ಇನ್ನು ನಿರ್ಧರಿಸಿಲ್ಲ. ಈಗಾಗಲೇ ಹಿರಿಯ ಕಲಾವಿದರಾದ ಅವಿನಾಶ್, ಶಿವರಾಮಣ್ಣ, ಶೋಭರಾಜ್, ರಮೇಶ್ ಭಟ್, ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಉತ್ಸವದ ಅಂಗವಾಗಿ ವಿಷ್ಣುವರ್ಧನ್ ಅವರ ವೀರಪ್ಪ ನಾಯಕ ಚಿತ್ರದ ಪುತ್ಥಳಿಯನ್ನು ಅನಾವರಣ ಮಾಡಲಿದ್ದು, 3 ದಿನಗಳ ಕಾಲ ವಿಷ್ಣುವರ್ಧನ್ ಅವರ ಹಾಡಿನ ರಸ ಸಂಜೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ ವಿಷ್ಣು ಜಯಂತಿ ಆಚರಿಸಲಾಗುವುದೆಂದು ಎಂದು ಹೇಳಿದರು. ಅಮೇರಿಕಾ, ದುಬೈ, ಆಸ್ಟೇಲಿಯಾ ಸೇರಿದಂತೆ ವಿವಿಧ ದೇಶಗಳಿಂದಲೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Leave a Comment