ಸೆ.16 ರಂದು ಶಾಂತಿಸಾಗರಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

ದಾವಣಗೆರೆ, ಸೆ. 14 – ಏಷ್ಯದಲ್ಲೇ 2ನೇ ಅತೀದೊಡ್ಡ ಕೆರೆಯಾದ ಶಾಂತಿಸಾಗರ ಒತ್ತುವರಿ ತೆರವುಗೊಳಿಸಬೇಕು ಹಾಗೂ ಹೂಳು ತೆಗೆಸುವ ಕುರಿತಂತೆ ಕಳೆದ ಹಲವಾರು ದಿನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಈ ಹೋರಾಟಕ್ಕೆ ಸ್ಪಂದನೆ ದೊರೆತಿದೆ. ಕೆರೆ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸೆ. 16 ರಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಶಾಂತಿಸಾಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಖ‌ಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿ ಅಧ್ಯಕ್ಷರು ಹಾಗೂ ಪಾಂಡೊಮಟ್ಟಿ ವಿರಕ್ತಮಠದ ಡಾ.ಶ್ರೀಗುರುಬಸವ ಸ್ವಾಮೀಜಿಯವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇತಿಹಾಸ ಪ್ರಸಿದ್ದವಾದ ಶಾಂತಿಸಾಗರ ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಹೊಳಲ್ಕೆರೆ ಸೇರಿದಂತೆ ಹಲವಾರು ಭಾಗದ ಕುಡಿಯುವ ನೀರಿನ ಕೇಂದ್ರ ಸ್ಥಳ. ಆದರೆ ಕೆರೆ ಸುಮಾರು 1 ಸಾವಿರ ಎಕರೆ ಪ್ರದೇಶದಷ್ಟು ಒತ್ತುವರಿಯಾಗಿದೆ. 11ನೇ ಶತಮಾನದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಅಲ್ಲಿನಿಂದ ಇಲ್ಲಿಯವರೆಗೂ ಕೆರೆಯ ಹೂಳು ತೆಗೆದಿಲ್ಲ. ಕೆರೆಯಲ್ಲಿ ಸುಮಾರು 12 ರಿಂದ 13 ಅಡಿಗಳಷ್ಟು ಹೂಳು ತುಂಬಿದೆ. ಒತ್ತುವರಿಯಾಗಿರುವ ಜಾಗವನ್ನು ತೆರೆವುಗೊಳಿಸಬೇಕು. ಮೂಲವಿಸ್ತೀರ್ಣವನ್ನು ಸರ್ವೇ ಇಲಾಖೆಯಿಂದ ಗುರುತಿಸಬೇಕು. ಕೆರೆಯಲ್ಲಿ ಸುಮಾರು 2 ಟಿಎಂಸಿ ನೀರು ಶೇಖರಣೆಯಾಗುವ ವ್ಯವಸ್ಥೆಯಿದೆ. ಆದರೆ ಹೂಳು ತೆಗೆದರೆ ನಾಲ್ಕುವರೆ ಟಿಎಂಸಿ ಸಂಗ್ರಹಿಸಬಹುದಾಗಿದೆ. ಆದ್ದರಿಂದ ಸರ್ಕಾರ ಕೆರೆ ಹೂಳು ತೆಗೆಸಿ ಸಂರಕ್ಷಿಸುವ ಅವಶ್ಯಕತೆ ಇದೆ. ಈಗಾಗಲೇ ನಮ್ಮ ಖಡ್ಗ ಸಂಘದ ಸದಸ್ಯರು ಹಲವಾರು ರೀತಿಯ ಹೋರಾಟ ನಡೆಸಿದರ ಫಲವಾಗಿ ಸ್ಪಂದನೆ ದೊರೆತಿದೆ. ಸುಮಾರು 80 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಇದೊಂದು ರಾಷ್ಟ್ರೀಯ ನೈಸರ್ಗಿಕ ಸಂಪತ್ತು. ಅದನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ನೀಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಸರ್ವೆಕಾರ್ಯ ನ‌ಡೆಸಬೇಕು.ಗಡಿಗುರುತಿಸುವ ಕೆಲಸ ಮಾಡಬೇಕು. ಸಂಘದ ಸದಸ್ಯರು ಸಿದ್ದಪಡಿಸಿರುವ ರೂಪುರೇಷೆಯಂತೆ ಹೂಳು ತೆಗೆಸುವ ಕಾರ್ಯಕ್ಕೆ ಮುಂದಾದರೆ ಸುಮಾರು 2 ವರ್ಷ ಈ ಕಾರ್ಯ ನಡೆಯಲಿದೆ. ಇದನ್ನು ಮನಗಂಡು ಅತೀ ಶೀಘ್ರದಲ್ಲಿಯೇ ಕ್ರಮ ವಹಿಸುವುದು ಅವಶ್ಯಕತೆ ಇದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕೇದಾರನಾಥ ಮಠದ ಶ್ರೀಶಾಂತವೀರಸ್ವಾಮೀಜಿ, ಬಿ.ಆರ್.ರಘು, ಹೆಚ್.ವಿ.ರವೀಂದ್ರನಾಥ, ಬಿ.ಚಂದ್ರಹಾಸ್, ಷಣ್ಮುಖಯ್ಯ, ಎಂ.ಬಿ.ವೀರಭದ್ರಪ್ಪ ಇದ್ದರು.

Leave a Comment