ಸೆ.12ರ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ವಿವಿಧ ದಲಿತ ಪರ ಸಂಘಟನೆಗಳ ಹೇಳಿಕೆ

ಬಳ್ಳಾರಿ. ಸೆ.8: ಇದೇ ತಿಂಗಳ 12ರಂದು ಬಳ್ಳಾರಿಗೆ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರುಗಳು ಆಗಮಿಸುತ್ತಿದ್ದು, ಅಂದು ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಹೇಳಿಕೊಂಡಿರುವ ದಲಿತ ಸಂಘಟನೆಗಳ ಒಕ್ಕೂಟದ ಪ್ರತಿಭಟನೆಯನ್ನು ತಾವು ಬೆಂಬಲಿಸುತ್ತಿಲ್ಲ. ಅದರಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವಿವಿಧ ದಲಿತ ಪರ ಸಂಘಟನೆಗಳ ಧುರೀಣರು ತಿಳಿಸಿದ್ದಾರೆ.

ವಿವಿಧ ದಲಿತ ಪರ ಸಂಘಟನೆಗಳ ಧುರೀಣರು ಇಂದು ಪೂರ್ವಾಹ್ನ ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರುಗಳು ಸೆ.12ರಂದು ಬಳ್ಳಾರಿಗೆ ಬಡವರಿಗೆ ನಿವೇಶನ, ವಸತಿ ಯೋಜನೆಯ ಪಟ್ಟಾ ವಿತರಣೆ ಸೇರಿದಂತೆ ಅನೇಕ ಜನಪರ-ಅಭಿವೃದ್ಧಿ ಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಒಳ ಮೀಸಲಾತಿಗೆ ಆಗ್ರಹಿಸಿ ‘ಅರೆ ಬತ್ತಲೆ’ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟದ ಮತ್ತು ಇತರೆ ಕೆಲ ಸಂಘಟನೆಗಳ ಧುರೀಣರು ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಮ್ಮ ಸಂಘಟನೆಗಳ ಹೆಸರುಗಳನ್ನು ಕೂಡಾ ಕರ ಪತ್ರಗಳಲ್ಲಿ ಮುದ್ರಿಸಿದ್ದಾರೆ. ನಮ್ಮ ಸಂಘಟನೆಗಳಿಗೆ ಮಾಹಿತಿ ನೀಡದೇ ಗಮನಕ್ಕೆ ತಾರದೇ ನಮ್ಮ ಸಂಘಗಳ ಹೆಸರುಗಳನ್ನು ಹಾಕಿಕೊಂಡಿದ್ದಾರೆ. ನಾವು ಅಂದಿನ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿಲ್ಲ, ಬೆಂಬಲಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ನಮ್ಮ ಸಂಘಟನೆಗಳು ಅಂದು ಮುಖ್ಯಮಂತ್ರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸುವುದಾಗಿ ಹೇಳಿದ ಈ ಧುರೀಣರು, ತಮ್ಮ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು ಅಂದಿನ ಪ್ರತಿಭಟನೆಯಲ್ಲಿ ಭಾಗಿಯಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ.ಎನ್.ಮೂರ್ತಿ ಬಣ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎಂ.ವೆಂಕಟೇಶ್ ಬಣ) ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ಮತ್ತು ಮಾದಿಗ ನೌಕರರ ಹಾಗೂ ವಕೀಲರ ಸಂಘಗಳು ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿಸಿವೆ.

ವಿವಿಧ ಸಂಘಟನೆಗಳ ಧುರೀಣರುಗಳಾದ ದುರುಗಪ್ಪ ತಳವಾರ್, ಹೆಚ್.ಹುಸೇನಪ್ಪ, ಎಸ್.ಕೆಂಚಪ್ಪ, ಎ.ಕೆ.ಗಂಗಾಧರ, ಪಿ.ತಾಯಪ್ಪ, ಗಾದಿಲಿಂಗಪ್ಪ, ಕೆ.ನಾಗರಾಜ್, ಎಂ.ಶಿವಪ್ಪ, ಪರಶುರಾಂ, ಹಾಗೂ ಕೆ.ವೆಂಕಟೇಶ್ ಮೂರ್ತಿ, ಹೆಚ್.ರಮೇಶ್ ಗೋನಾಳ್, ಟಿ.ತಾಯಣ್ಣ, ಹಾಗೂ ರೇಣುಕುಮಾರ್ ಮತ್ತು ಎ.ಕೆ.ಹುಲುಗಪ್ಪ, ಪ್ರಸಾದ್, ವೀರಸ್ವಾಮಿ, ದುರುಗೇಶ್, ಸಣ್ಣ ಹೊನ್ನೂರಪ್ಪ ಸೇರಿದಂತೆ ಕುಮಾರಸ್ವಾಮಿ ಮತ್ತು ಈರಪ್ಪ, ರಾಮಚಂದ್ರಪ್ಪ, ಚಿಕ್ಕ ಗಾದಿಲಿಂಗಪ್ಪ, ರಾಚೋಟಪ್ಪ, ಲಾಲೆಪ್ಪ, ಪ್ರಕಾಶ್ ಮತ್ತು ನಾಗಭೂಷಣ್, ಇ.ಜಂಬಣ್ಣ, ಹುಲ್ತೆಪ್ಪ, ಜಿ.ಹೆಚ್.ರಮೇಶ್, ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೆ.12ರ ಪ್ರತಿಭಟನೆಗೆ ತಾವು ಬೆಂಬಲಿಸುತ್ತಿಲ್ಲ ಎಂದು ತಿಳಿಸಿದರು.

Leave a Comment