ಸೆ.10 ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ ಖಂಡಿಸಿ

ಜಿಲ್ಲೆ ಬಂದ್‌ಗೆ ಕರೆ: ಬೆಂಬಲ ಸೂಚಿಸಲು ಮನವಿ
ರಾಯಚೂರು.ಸೆ.08- ಕೇಂದ್ರದ ಬಿಜೆಪಿ ಸರಕಾರ ನಿರಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷವು ಸೆ.10 ರಂದು ಭಾರತ್ ಬಂದ್‌ಗೆ ಕರೆ ನೀಡಿರುವುದರಿಂದ ಜಿಲೆಯಾದ್ಯಂತ ಬಂದ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಸದ ಬಿ.ವಿ.ನಾಯಕ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿರುವುದರಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ, ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ. ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ಗೆ 73.77 ರೂ. ಡಾಲರ್‌ಗೆ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್‌ ದರ ಹೆಚ್ಚಳ ಮಾಡುವಲ್ಲಿ ನಿರತರಾಗಿರುವುದು ಖಂಡನೀಯ.
ಈ ಹಿಂದೆ ಯುಪಿಎ ಸರ್ಕಾರವು 2014 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 106 ರೂ. ಡಾಲರ್‌ಗಿತ್ತು, ಆ ಸಂದರ್ಭದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆ ಏರಿಸಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಕೇಂದ್ರ ಬಿಜೆಪಿ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿಸಿರುವುದು ಸರಿಯಾದ ಕ್ರಮವಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆ ಅಧಿಕಾರಕ್ಕೆ ಬಂದ ನಂತರ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ, ರೈತರ ಸಾಲಮನ್ನಾ ಹಾಗೂ ಬೆಂಬಲ ಬೆಲೆ ನಿಗಧಿಪಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲರಾಗಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತಿದಾಗ ಪ್ರಧಾನ ಮಂತ್ರಿಗಳು ಉತ್ತರಿಸದೇ ಮೌನಕ್ಕೆ ಶರಣಾಗುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಓಳಪಡಿಸಬಾರದೆಂದು ತಿಳಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಜಿಲ್ಲೆ ಬಂದ್‌ಗೆ ಶಿಕ್ಷಣ ಸಂಸ್ಥೆಗಳು, ಗಂಜ್ ವರ್ತಕರು ಬೆಂಬಲ ಸೂಚಿಸಬೇಕೆಂದು ತಿಳಿಸಿದರು.
ಗ್ರಾಮಾಂತರ ಶಾಸಕ ದದ್ದಲ ಬಸನಗೌಡ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಜಯವಂತರಾವ್ ಪತಂಗೆ, ಜಿ.ಬಸವರಾಜ ರೆಡ್ಡಿ, ಶಿವಮೂರ್ತಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಂ, ಬಾಬುರಾವ್, ತಾಯಣ್ಣ ನಾಯಕ, ನಿರ್ಮಲಾ ಬೆಣ್ಣೆ ಉಪಸ್ಥಿತರಿದ್ದರು.

Leave a Comment