ಸೆ.೧೫: ನೂತನ ಬಿಷಪ್‌ರ ಪಟ್ಟಾಭಿಷೇಕ

ಮಂಗಳೂರು, ಸೆ.೧೧- ಅತೀ ವಂದನೀಯ ರೆ.ಡಾ.ಪೀಟರ್ ಪೌಲ್ ಸಲ್ಡಾನಾರನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನೂತನ ಬಿಷಪ್ ಆಗಿ ನಿಯೋಜಿಸುವ ಸಮಾರಂಭ ಸೆ. ೧೫ರಂದು ನಗರದ ರೊಸಾರಿಯೊ ಕೆಥಡ್ರಲ್‌ನಲ್ಲಿ ಬೆಳಗ್ಗೆ ೯:೩೦ಕ್ಕೆ ನಡೆಯಲಿದೆ ಎಂದು ಹಾಲಿ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ತಿಳಿಸಿದರು.
ಬಿಷಪ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರೆ.ಡಾ.ಪೀಟರ್ ಪೌಲ್ ಸಲ್ಡಾನಾ ಮಂಗಳೂರು ಧರ್ಮಪ್ರಾಂತದ ೧೪ನೆ ಬಿಷಪ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು. ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ಪೀಟರ್ ಮಚಾದೊ ಮತ್ತು ಉಡುಪಿಯ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೋ ಹಾಗೂ ತಾನು ಸೇರಿ ನೂತನ ಬಿಷಪ್‌ರನ್ನು ಅಭಿಷೇಕಿಸುವ ಮೂಲಕ ವಿಧಿಬದ್ಧವಾಗಿ ನಿಯೋಜನೆ ನೆರವೇರಲಿದೆ ಎಂದವರು ಹೇಳಿದರು. ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸುವ ಸಮಾರಂಭ ನಡೆಯಲಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೂತನ ಬಿಷಪ್‌ರನ್ನು ಸನ್ಮಾನಿಸುವರು. ಸಮಾರಂಭದಲ್ಲಿ ಭಾರತಕ್ಕೆ ಪೋಪ್ ಫ್ರಾನ್ಸಿಸ್‌ರ ಪ್ರತಿನಿಧಿ (ನುನ್ಸಿಯೊ)ರವರ ಕೌನ್ಸಿಲರ್ ಅತಿ ವಂ, ಹಾವಿಯರ್ ಡಿ. ಫೆರ್ನಾಂಡಿಸ್ ಜಿ., ಮಹಾ ಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಮಂಗಳೂರು ಧರ್ಮಪ್ರಾಂತದ ಕೆಥೊಲಿಕ್ ಬಾಂಧವರು ಸೇರಿ ೧೦,೦೦೦ಕ್ಕೂ ಅಧಿಕ ಮಂದಿ ಭಾಗವಹಿಸುವರು ಎಂದು ಅವರು ತಿಳಿಸಿದರು. ಡಾ.ಅಲೋಶಿಯ್ ಪೌಲ್ ಡಿಸೋಜ ೧೯೯೬ರಿಂದ ೨೦೧೮ರವರೆಗೆ ೨೨ ವರ್ಷಗಳ ಸುದೀರ್ಘ ಸೇವೆಯನ್ನು ಮಾಡಿ ನಿವೃತ್ತರಾಗುತ್ತಿದ್ದು, ಪೋಪ್ ಫ್ರಾನ್ಸಿಸ್‌ರವರು ಅತಿ ವಂ. ಡಾ.ಪೀಟರ್ ಪೌಲ್ ಸಲ್ಡಾನಾರನ್ನು ಜುಲೈ ೩ರಂದು ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಕಾರ್ಯಕ್ರಮದ ಸಹ ಸಂಯೋಜಕ ಎಂ.ಪಿ. ನೊರೊನ್ಹ ತಿಳಿಸಿದರು. ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಜಲ ಪ್ರಳಯದ ಹಿನ್ನೆಲೆಯಲ್ಲಿ ಬಿಷಪ್ ನಿಯೋಜನೆಯ ಸಮಾರಂಭಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಸರಳ ಸಮಾರಂಭದಲ್ಲಿ ಸಾವಿರಾರು ಮಂದಿ ಕರ್ನಾಟಕದ ವಿವಿಧ ಮೂಲಗಳಿಂದ ದೇಶ ವಿದೇಶಗಳಿಂದ ಬರುವುದರಿಂದ ಬಂದವರಿಗೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಸರಳ ರೀತಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಜಲ ಪ್ರವಾಹಕ್ಕೆ ಸಂಬಂಧಿಸಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತವು ಈಗಾಗಲೇ ಕೇರಳ ಹಾಗೂ ಕೊಡಗು ಜಿಲ್ಲೆಗಳಿಗೆ ಸುಮಾರು ೧.೫ ಕೋಟಿ ರೂ.ಗಳಿಗೂ ಅಧಿಕ ವೌಲ್ಯದ ಸೊತ್ತುಗಳನ್ನು ರವಾನಿಸಿದೆ. ಇದೇ ವೇಳೆ ಧರ್ಮಪ್ರಾಂತದಿಂದ ದೇಣಿಗೆ ಸಂಗ್ರಹವೂ ನಡೆಯುತ್ತಿದ್ದು, ೬೫ ಲಕ್ಷ ರೂ.ಗಳಷ್ಟು ಸಂಗ್ರಹವಾಗಿದೆ. ಇದನ್ನು ಕೂಡಾ ಸಂತ್ರಸ್ತರಿಗೆ ಒದಗಿಸುವ ಕಾರ್ಯ ನಡೆಯಲಿದೆ ಎಂದು ಹಾಲಿ ಬಿಷಪ್ ಅತಿ ವಂ. ರೆ.ಡಾ.ಅಲೋಶಿಯಸ್ ಪೌಲ್ ಡಿಸೋಜ ಸ್ಪಷ್ಟಪಡಿಸಿದರು.

Leave a Comment