ಸೆಲೆಬ್ರಿಟಿಗಳು ಕೆರೆ ಅಭಿವೃದ್ಧಿಗೆ ಮುಂದಾದರೆ ಉತ್ತಮ

ಹುಳಿಯಾರು, ಏ. ೨೧- ಚಿತ್ರನಟ ಯಶ್ ರೀತಿ ಕ್ರಿಕೆಟ್, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಸೆಲೆಬ್ರಿಟಿಗಳು ಕೆರೆಗಳ ಅಭಿವೃದ್ಧಿಗೆ ಮುಂದಾದರೆ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಜಿ.ಪಂ. ಸದಸ್ಯ ವೈ.ಸಿ.ಸಿದ್ಧರಾಮಯ್ಯ ಹೇಳಿದರು.

ಪಟ್ಟಣಕ್ಕೆ ಸಮೀಪವಿರುವ ನಂದಿಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಸಮಾಜದ ಋಣ ಇದ್ದೇ ಇರುತ್ತದೆ. ಚಿತ್ರನಟ ಯಶ್ ಕೆರೆ ಅಭಿವೃದ್ಧಿ ಮೂಲಕ ಸಮಾಜದ ಋಣ ತೀರಿಸಲು ಮುಂದಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಬತ್ತಿದ್ದ ಕೆರೆಯಲ್ಲಿ ನೀರು ಉಕ್ಕಿದೆ. ಇದರಿಂದ ಕೆರೆಯಲ್ಲಿ ಆರೇಳು ದಶಕಗಳಿಂದ

ತುಂಬಿರುವ ಊಳನ್ನು ತೆಗೆದರೆ ಜಲಮೂಲ ಕಾಣಬಹುದೆಂದು ಜಗ್ಗತ್ತಿಗೆ ತೋರಿಸಿದ್ದಾರೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಇತರೆ ಕ್ಷೇತ್ರಗಳ ಸೆಲೆಬ್ರಿಟಿಗಳು ಕೆರೆ ಅಭಿವೃದ್ಧಿಗೆ ಮುಂದಾದರೆ ಭವಿಷ್ಯದಲ್ಲಿ ಎದುರಿಸಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಹಿಂದೆ ಮನೆಗೊಂದು ಬಾವಿ ಇತ್ತು. ನಂತರ ಊರಿಗೊಂದು ಕೆರೆ ಆಯ್ತು. ಈಗ ಬಾವಿನೂ ಇಲ್ಲ, ಕೆರೆನೂ ಇಲ್ಲದಂತಾಗಿ ನೀರಿನ ಹಾಹಾಕಾರ ಸೃಷ್ಠಿಯಾಗಿದೆ. ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರಿನ ಶೇಖರಣೆ

ತೊಂದರೆಯಾಗಿರುವುದನ್ನು ಮನಗಂಡ ಡಾ.ವೀರೇಂದ್ರ ಹೆಗ್ಗಡೆಯವರು ಧಾರವಾಡದಲ್ಲಿ ಮೊದಲ ಬಾರಿಗೆ ಕೆರೆ ಪುನಶ್ಚೇತನಕ್ಕೆ ಮುನ್ನುಡಿ ಬರೆದರು. ಇಂದು ರಾಜ್ಯಾದ್ಯಾಂತ 70 ಕೆರೆಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಎನ್.ಬಿ.ದೇವರಾಜು ವಹಿಸಿದ್ದರು.

ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಪ್ರಶಾಂತ್, ಗ್ರಾಮಸ್ಥರಾದ ಮಹಾಲಿಂಗಪ್ಪ, ಬಸವರಾಜಪ್ಪ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment