ಸೂರ್ಯ ಇಣುಕಿದರೂ ನಿಲ್ಲದ ನೆರೆ-ಜನಜೀವನಕ್ಕೆ ಇನ್ನೂ ಕೂಡಾ ಹೊರೆ

ಹುಬ್ಬಳ್ಳಿ, ಆ 11: ಪಶ್ಚಿಮ ಘಟ್ಟ, ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಆರ್ಭಟಿಸಿದ ವರುಣದೇವ ಸದ್ಯ ಅಲ್ಪ ಪ್ರಮಾಣದಲ್ಲಿ ಶಾಂತನಾಗಿದ್ದಾನೆ. ಆದರೆ ನದಿಗಳ, ಉಪನದಿಗಳ, ಹಳ್ಳಕೊಳ್ಳಗಳ ರಭಸ ಇನ್ನೂ ತಗ್ಗದೆ, ಪ್ರವಾಹ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣಾಕಾರ್ಯ ಇನ್ನೂ ಮುಂದುವರೆದಿದೆ.
ಮಹಾರಾಷ್ಟ್ರದ ಕೆಲ ಕಡೆಗಳಲ್ಲಿ ಮಳೆ ಮುಂದುವರೆದಿದ್ದು, ಈ ರಾಜ್ಯದ ಜಲಾಶಯಗಳಿಂದ ಹೊರಹೊಮ್ಮುತ್ತಿರುವ ನೀರಿನ ಹರಿವಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿ ಇನ್ನೂ ತಗ್ಗಿಲ್ಲ.
ನದಿಪಾತ್ರದ ಕೆಲ ಗ್ರಾಮಗಳಲ್ಲಿ ಪ್ರವಾಹಕ್ಕೆ ಇನ್ನೂ ಜನರು ಸಿಲುಕಿಕೊಂಡಿದ್ದು, ಕೆಲ ಕಡೆಗಳಲ್ಲಿ ಅವರನ್ನು ರಕ್ಷಿಸಲಾಗುತ್ತಿದೆಯಾದರೂ, ಇನ್ನೂ ಕೆಲ ಜಲಾವೃತ ಪ್ರದೇಶಗಳಲ್ಲಿ ಜನರು ಸಂಪರ್ಕ ಸಿಗುತ್ತಿಲ್ಲ. ಕೆಲ ಮಾಹಿತಿಗಳ ಆಧಾರದ ಮೇಲೆ ಅವರ ಶೋಧ ಕಾರ್ಯ ಮುಂದುವರೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಜಲಾವೃತಗೊಂಡ ಊದಗಟ್ಟಿ ಗ್ರಾಮದಲ್ಲಿ ಸಿಲುಕಿದ್ದ ಸುಮಾರು 6 ಜನರನ್ನು ರಕ್ಷಣಾ ಸಿಬ್ಬಂದಿಗಳು ಇಂದು ಬೆಳಿಗ್ಗೆ ಬೋಟ್‍ಮೂಲಕ ರಕ್ಷಿಸಿದ್ದಾರೆ. ಇದರಲ್ಲಿ ಬಾಣಂತಿ ಹಾಗೂ 7 ದಿನ ತುಂಬಿದ ಹಸುಗೂಸನ್ನು ರಕ್ಷಣೆ ಮಾಡಲಾಗಿದೆ.
ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಇಂಗಳಗಾಂವ ಗ್ರಾಮವೊಂದರ ತೋಟ ಸಂಪೂರ್ಣವಾಗಿ ಜಲಾವೃತವಾಗಿದ್ದು, ಇಲ್ಲಿ ಸುಮಾರು 40 ಜನರು ಹಾಗೂ 40ಕ್ಕಿಂತ ಹೆಚ್ಚು ಜಾನುವಾರುಗಳು ಸಿಲುಕಿಕೊಂಡಿವೆ. ನಮ್ಮನ್ನು ರಕ್ಷಣೆ ಮಾಡಿ ಎಂದು ಈ ಜನ ತಮ್ಮ ಸಂದೇಶಗಳನ್ನು ವಾಟ್ಸ್‍ಪ್ ಮೂಲಕ ಕಳುಹಿಸುತ್ತುರುವ ದೃಶ್ಯ ಕಂಡುಬಂತು. ರಕ್ಷಣಾ ಸಿಬ್ಬಂದಿಗಳು ಬೇರೆ ಸ್ಥಳಗಳಲ್ಲಿ ನಿಯೋಜಿತರಾಗಿದ್ದು ಸದ್ಯ ಇವರ ರಕ್ಷಣೆಗೆ ರಕ್ಷಣಾ ತಂಡ ಧಾವಿಸಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದು, ನದಿಗಳ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಅಂಕೋಲಾ ತಾಲೂಕಿನ ಗಂಗಾವಳಿ ನದಿ ಒಳಹರಿವು ಕೊಂಚ ಮಟ್ಟಿಗೆ ತಗ್ಗಿದೆಯಾದರೂ ಇನ್ನೂ ಸಾಕಷ್ಟು ಇಳಿಯಬೇಕಿದೆ.
ಕರಾವಳಿಯ ಸಮುದ್ರ ತೀರದ ಸ್ಥಳಗಳಲ್ಲಿ ಕೆಲ ಜನರು ಭಂಡಧೈರ್ಯ ಮಾಡಿ ಮುನ್ನುಗ್ಗುತ್ತಿದ್ದು, ಅವರನ್ನು ತಡೆಯುವ ಕಾರ್ಯ ಪೊಲೀಸ್ ಇಲಾಖೆ ಹಾಗೂ ಇತರ ರಕ್ಷಣಾ ತಂಡಗಳು ಮಾಡುತ್ತಿವೆ. ಅಲ್ಲದೆ ಜಿಲ್ಲಾಡಳಿತದಿಂದ ಸಮುದ್ರ ತೀರ ಪ್ರದೇಶಗಳಿಗೆ ಹೋಗದಂತೆ ಕಟ್ಟಚರದ ವಹಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ನೀಡಲಾಗಿದೆ.
ಸಂತ್ರಸ್ತರ ಆಕ್ರಂದನ:
ಪ್ರವಾಹದಿಂದಾಗಿ ಪ್ರಾಣ ತೆತ್ತವರ ಕುಟುಂಬದವರು ತಮ್ಮವರನ್ನು ಕಳೆದುಕೊಂಡಿರುವ ಸಂಕಟಕ್ಕೆ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ.
ತಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಂಡ ಜನತೆ ನಿಟ್ಟುಸಿರು ಬಿಡುವಷ್ಟರಲ್ಲೇ, ಅವರ ಆಸ್ತಿಪಾಸ್ತಿಗಳು ಈಗ ನೀರುಪಾಲಾಗಿವೆ. ಮನೆಮಠಗಳನ್ನು ಕಳೆದುಕೊಂಡಿರುವ ಜನರು ತಮ್ಮ ಮುಂದಿನ ಸ್ಥತಿಗತಿಗಳನ್ನು ನೆನೆದು ಕಣ್ಣೀರಿನ ಕೋಡಿಯನ್ನೇ ಹರಿಸುತ್ತಿದ್ದಾರೆ.
ಜನಪ್ರತಿನಿಧಿಗಳ, ಅಧಿಕಾರಿಗಳ ಮುಂದೆ ತಮ್ಮ ಭವಿಷ್ಯದ ಬವಣೆಯ ಚಿತ್ರವನ್ನೇ ಬಿಚ್ಚಿಟ್ಟು, ಪರಿಹಾರಕ್ಕಾಗಿ ಹಾತೊರೆಯುತ್ತಿದ್ದಾರೆ.
ಸಂತ್ರಸ್ತರಿಗೆ ವ್ಯವಸ್ಥೆ:
ಪ್ರವಾಹಪೀಡಿತ ಸ್ಥಳಗಳಿಂದ ಸಾವಿರಾರು ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಿದ್ದು, ಗಂಜಿ ಕೇಂದ್ರಗಳಲ್ಲಿ ಅವರಿಗೆ ಆಹಾರ, ಔಷದೋಪಚಾರದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ನಿರಾಶ್ರಿತರಿಗಾಗಿ ರಾಜ್ಯದ್ಯಾಂತ ಜನತೆ ಕಂಬನಿ ಮಿಡಿಯುತ್ತಿದ್ದು, ಅನುಕಂಪದ ಅಲೆ ಎದ್ದಿದೆ. ವಿವಿಧ ಆಹಾರ ಪದಾರ್ಥಗಳನ್ನು, ಔಷಧಿ, ಬಟ್ಟೆ ಸೇರಿದಂತ ಅವಶ್ಯಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದು, ತಮ್ಮ ಕೈಲಾದಷ್ಟು ಸಹಾಯಕ್ಕೆ ಮುಂದಾಗಿದ್ದಾರೆ.
ಭಾರತೀಯ ವಾಯು ಸೇನೆಯ ಕಾರ್ಯ ಚುರುಕಾಗಿದ್ದು, ಈಗಾಗಲೇ ಸಾಕಷ್ಟು ಜನರನ್ನು ಇವರ ಸಹಾಯದಿಂದ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
@12bc = ಧಾರವಾಡ ಜಿಲ್ಲೆ ಅತಿವೃಷ್ಟಿ
106 ಪರಿಹಾರ ಕೇಂದ್ರಗಳಲ್ಲಿ 40,363 ಜನರಿಗೆ ಆಶ್ರಯ 6366 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತರಾಗಿರುವ ಸುಮಾರು 40,363  ಜನರಿಗೆ 106 ಪರಿಹಾರ ಕೇಂದ್ರಗಳಲ್ಲಿ  ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.
6366 ಮನೆಗಳಿಗೆ ಹಾನಿಯಾಗಿದೆ. ಅವುಗಳಲ್ಲಿ ಈಗಾಗಲೇ 2055 ಮನೆಗಳಿಗೆ 1 ಕೋಟಿ 31 ಲಕ್ಷ ರೂ.ಪರಿಹಾರ ಒದಗಿಸಲಾಗಿದೆ.ಉಳಿದ ಮನೆಗಳ ಪರಿಹಾರ ಚೆಕ್ ಗಳು ಸಿದ್ಧವಾಗುತ್ತಿವೆ.
ಇದುವರೆಗೆ ಮೂರು ಜನ ಸಾವಿಗೀಡಾಗಿದ್ದಾರೆ. ಪರಿಹಾರ ವಿತರಿಸಲಾಗಿದೆ.151 ಜಾನುವಾರುಗಳ ಜೀವ ಹಾನಿಯಾಗಿದೆ.21 ಗ್ರಾಮಗಳು ಜಲಾವೃತಗೊಂಡಿವೆ.
86651 ಹೆಕ್ಟೇರ ಕೃಷಿ ಭೂಮಿ ಹಾಳಾಗಿದ್ದು.ಎನ್ ಡಿ ಆರ್ ಎಫ್ ಮಾನದಂಡಗಳ ಪ್ರಕಾರ ಸುಮಾರು 58 .91 ಕೋಟಿ ರೂ.ಬೆಳೆಹಾನಿಯಾಗಿದೆ.
18426 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು.ಸುಮಾರು 12 .51 ಕೋಟಿ ರೂ.ಮೌಲ್ಯದ ಬೆಳೆ ಹಾನಿ ಅಂದಾಜಿಸಲಾಗಿದೆ.
413 ಕಿ.ಮೀ.ರಸ್ತೆ ,47 ಸೇತುವೆಗಳು, 19 ಕೆರೆಗಳು ,71 ಕಾಲುವೆಗಳು, 150 ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗಿವೆ.

ಕನ್ನಡ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣಗಳನ್ನು ನೀಡುತ್ತಿರುವ ದೃಶ್ಯ.

Leave a Comment