ಸೂರ್ಯನ ಗುರುತ್ವಾಕರ್ಷಣೆ ಕುಸಿಯುತ್ತಿದೆ

ಸೌರ ಮಂಡಲದ ಅಧಿಪತಿ ಸೂರ್ಯನಿಗೆ ವಯಸ್ಸಾಗುತ್ತಾ ಬಂದಿದ್ದು, ದಿನದಿಂದ ದಿನಕ್ಕೆ ತನ್ನ ಗುರುತ್ವಾಕರ್ಷಣೆ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದಾನೆ. ಇದರಿಂದಾಗಿ ಸೌರಮಂಡಲದಲ್ಲಿಯ ಗ್ರಹಗಳು ಸೂರ್ಯನ ಗುರುತ್ವಾಕರ್ಷಣೆ ಹಿಡಿತದಿಂದ ಹೊರ ಹೋಗುತ್ತಿವೆ ಎಂದು ವಿಜ್ಞಾನಿಗಳ ತಂಡ ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದೆ.

ಸೂರ್ಯ ವಯಸ್ಸಾದಂತೆ ತನ್ನ ಗುರುತ್ವಾಕರ್ಷಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಅವನ ಸುತ್ತಲೂ ಸುತ್ತುತ್ತಿರುವ ಗ್ರಹಗಳು ಸೂರ್ಯನ ಸೆಳೆತವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಸೂರ್ಯನ ದ್ರವ್ಯರಾಶಿ ಕುಗ್ಗುತ್ತಿರುವುದು ಅದರಿಂದಾಗಿ ಗುರುತ್ವಾಕರ್ಷಣಾ ಶಕ್ತಿ ಕುಂದುತ್ತಿರುವುದರಿಂದ ಸೌರ ಮಂಡಲದಲ್ಲಿಯ ಗ್ರಹಗಳು ತಮ್ಮ ಕಕ್ಷೆಗಳನ್ನು ಹೊರಮುಖವಾಗಿ ಹಿಗ್ಗಿಸಿಕೊಳ್ಳುತ್ತಿವೆ ಎಂದು ನಾಸಾ ಅಧ್ಯಯನ ತಂಡ ಹೇಳಿದೆ. ಸೂರ್ಯನಿಗೆ ಅತಿ ಹತ್ತಿರದ ಬುಧ ಗ್ರಹದ ಕಕ್ಷೆಯಲ್ಲಿಯ ಬದಲಾವಣೆಗಳ ಅಧ್ಯಯನದ ಮೂಲಕ ಸೂರ್ಯನ ತೂಕ ಈ ಹೊಸ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

೫ ಶತಕೋಟಿ ವರ್ಷಗಳ ಹಿಂದಿನ ಸೂರ್ಯ ಕ್ರಮೇಣ ತನ್ನಲ್ಲಿಯ ದ್ರವ್ಯರಾಶಿ ಆ ಮೂಲಕ ಗುರುತ್ವಾಕರ್ಷಣೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಹೀಗಾಗಿ ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳು ತಮ್ಮ ಕಕ್ಷೆಯನ್ನು ಹೊರಕ್ಕೆ ಹಿಗ್ಗಿಸಿಕೊಳ್ಳುತ್ತಿವೆ ಎಂದು ನ್ಯಾಷನಲ್ ಏರೋನಾಟಿಕಲ್ ಅಡ್ಮಿಸ್ಟ್ರೇಷನ್ (ನಾಸಾ) ಮತ್ತು ಮಸ್ಸಾಚುಸೆಟ್ಟೆ ತಾಂತ್ರಿಕ ಸಂಸ್ಥೆಯ (ಎಂಐಟಿ) ಅಧ್ಯಯನ ತಂಡ ಹೇಳಿದೆ. ಅಧ್ಯಯನ ವರದಿ ನೇಚರ್ ಕಮ್ಯುನಿಕೇಷನ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿವೆ.

ಸೌರಮಂಡಲದಲ್ಲಿ ಸೂರ್ಯನಿಗೆ ಅತಿ ಹತ್ತಿರದಲ್ಲಿರುವ ಬುಧ ಗ್ರಹದ ಚಲನೆ ಮತ್ತು ಸೂರ್ಯನಲ್ಲಿಯ ದ್ರವ್ಯರಾಶಿಯ ಇಳಿಕೆ ಕುರಿತಂತೆ ನಡೆಸಿದ ಅಧ್ಯಯನದಿಂದ ಸೂರ್ಯ ತನ್ನ ಗುರುತ್ವಾಕರ್ಷಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಅಂಶ ದೃಢಪಟ್ಟಿದೆ.

ಬುಧಗ್ರಹ ಸೂರ್ಯನಲ್ಲಿಯ ಚಟುವಟಿಕೆ ಮತ್ತು ಗುರುತ್ವಾಕರ್ಷಣೆಯ ಏರಿಳಿತಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದರಿಂದ ಈ ಗ್ರಹದ ಚಲನ-ವಲನಗಳನ್ನೇ ಸೂರ್ಯನ ಗುರುತ್ವಾಕರ್ಷಣೆ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಬಳಸಿಕೊಂಡಿದೆ.

ಇದರ ಜೊತೆಗೆ ಈ ಗ್ರಹ ಕುರಿತಂತೆ ನಾಸಾದ ಮೆಸೇಂಜರ್ ಬಾಹ್ಯಾಕಾಶ ನೌಕೆ ಕಲೆ ಹಾಕಿರುವ ಮಾಹಿತಿಯನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಸೂರ್ಯನ ದ್ರವ್ಯರಾಶಿ ಕಡಿಮೆಯಾದಂತೆ ಅದರ ಗುರುತ್ವಾಕರ್ಷಣೆಯ ಶಕ್ತಿಯೂ ಕುಂದುತ್ತಾ ಬರುತ್ತಿದೆ ಎಂಬುದು ಬುಧಗ್ರಹದ ಕಕ್ಷಾ ಪಥದಲ್ಲಿಯ ಬದಲಾವಣೆಗಳಿಂದ ತಿಳಿದು ಬರುತ್ತದೆ ಎಂದು ಮಸ್ಸಾಚುಸೆಟ್ಟೆ ತಂತ್ರಜ್ಞಾನ ಸಂಸ್ಥೆಯ ಸಂಶೋಧಕ ಆಂಟೋನಿಯೋಗೆನೋವಾ ಹೇಳಿದ್ದಾರೆ.

ಆಲ್ಬರ್ಟ್ ಐನ್‌ಸ್ಟಿನ್‌ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವೂ (ಥೀರಿ ಆಫ್ ರಿಲೆಟಿವಿಟಿ)ಸೂರ್ಯನ ಗುರುತ್ವಾಕರ್ಷಣೆ ಕುಗ್ಗುವಿಕೆ ಹಾಗೂ ಬುಧಗ್ರಹದ ಕಕ್ಷೆ ಹಿಗ್ಗುವುದರ ಪ್ರಕ್ರಿಯೆಗೆ ಪೂರಕವಾಗಿದೆ.

ನಾವಿರುವ ಸೌರಮಂಡಲದಲ್ಲಿಯ ೯ ಗ್ರಹಗಳು ಸೂರ್ಯನ ಸುತ್ತ ನಿಗಧಿತ ಕಕ್ಷೆಗಳಲ್ಲಿ ಸುತ್ತುವುದಕ್ಕೂ ಸೂರ್ಯನಲ್ಲಿಯ ಗುರುತ್ವಾಕರ್ಷಣಾ ಶಕ್ತಿಯೇ ಕಾರಣ. ಸೌರ ಮಂಡಲದಲ್ಲಿಯ ೯ ಗ್ರಹಗಳಲ್ಲಿ ಬುಧಗ್ರಹ ಸೂರ್ಯನಿಗೆ ಅತಿ ಸಮೀಪದ್ದಾಗಿದೆ.

ಇದು ಸೂರ್ಯನನ್ನು ಒಂದು ಸುತ್ತು ಹಾಕಲು ೮೮ ದಿನ ಸಾಕು. ಸೂರ್ಯನಲ್ಲಿಯ ಎಲ್ಲ ಏರಿಳಿತಗಳೂ ಬುಧಗ್ರಹದ ಮೇಲೆ ಹೆಚ್ಚಿನ ಅಂಶದಲ್ಲಿ ಪರಿಣಾಮ ಬೀರುವುದರಿಂದ ಸೂರ್ಯನ ಗುರುತ್ವಾಕರ್ಷಣಾ ಅಧ್ಯಯನಕ್ಕಾಗಿ ಬುಧಗ್ರಹವನ್ನು ಪರೋಕ್ಷವಾಗಿ ಬಳಸಿಕೊಳ್ಳಲಾಗಿದೆ.

Leave a Comment