ಸೂರತ್ ನ್ಯಾಯಾಲಯಕ್ಕೆ ಹಾಜರಾದ ರಾಹುಲ್

ಸೂರತ್, ಅ. ೧೦- ಮೋದಿ ಹೆಸರಿಟ್ಟುಕೊಂಡವರೆಲ್ಲ ಕಳ್ಳರು ಎಂದು ಜರಿದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಇಂದು ಸೂರತ್‌ನ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದರು.
ರಾಹುಲ್‌ಗಾಂಧಿ ಖುದ್ದು ಹಾಜರಿಯಾದ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿದೆ.
ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನೀರವ್‌ಮೋದಿ, ಲಲಿತ್ ಮೋದ್, ನರೇಂದ್ರಮೋದಿ ಹೆಸರಿನ ಮುಂದಿರುವ ಮೋದಿ ಹೆಸರಿನ ಎಲ್ಲರೂ ಕಳ್ಳರು ಎಂದು ಜರಿದಿದ್ದರು.
ಈ ಸಂಬಂಧ ಗುಜರಾತ್‌ನ ಸೂರತ್ ಶಾಸಕ ಪೂರ್ಣೇಶ್ ಮೋದಿ ರಾಹುಲ್‌ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಸರ್ ನೇಮ್ ಇರುವ ಎಲ್ಲರನ್ನೂ ಕಳ್ಳರು ಎಂದು ರಾಹುಲ್‌ಗಾಂಧಿ ಜರಿಯುವ ಮೂಲಕ ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ನ್ಯಾಯಮೂರ್ತಿ ಬಿ.ಎಚ್. ಕಪಾಡಿಯಾ ಕಳೆದ ಮೇ ತಿಂಗಳಲ್ಲಿ ಅರ್ಜಿಯನ್ನು ಸ್ವೀಕರಿಸಿ ರಾಹುಲ್‌ಗಾಂಧಿಯವರಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್‌‌ಗಾಂಧಿ ನ್ಯಾಯಾಲಯದ ಮುಂದೆ ಹಾಜರಾದರು.
ನ್ಯಾಯಾಲಯಕ್ಕೆ ಹಾಜರು
ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಮಾಡಿದ ಮತ್ತೊಂದು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌‌ಗಾಂಧಿ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಅಹಮದಾಬಾದ್‌ನ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ಅಮಿತ್ ಶಾ ವಿರುದ್ಧ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಕೆ ಸದಸ್ಯ ಬ್ರಾಹ್ಮ್ ಭಟ್ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗಳಿಗೆ ಈ ತಿಂಗಳ 21 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ 13 ಮತ್ತು 15 ರಂದು ಮಹಾರಾಷ್ಟ್ರ ಮತ್ತು ಅ. 14 ರಂದು ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಹತಾಶೆ ರಾಹುಲ್ ಟೀಕೆ
ಬಿಜೆಪಿ ನಾಯಕರು ಹತಾಶರಾಗಿ ತಮ್ಮ ಮೇಲೆ ಮಾನನಷ್ಟ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದರಿಂದ ತಾವು ವಿಚಲಿತರಾಗುವುದಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಸಿಗುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತಾವು ಸದಾ ಚಿರಋಣಿ. ಇಂತಹ ಹಲವು ಪ್ರಕರಣಗಳನ್ನು ತಾವು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

Leave a Comment