ಸೂಪರ್ ಟಾಕ್ ಟೈಮ್‌ನಲ್ಲಿ ಬದುಕಿನ ಬಣ್ಣ ಬಿಚ್ಚಿಟ್ಟ ನೀನಾಸಂ

ಸ್ಯಾಂಡಲ್‌ವುಡ್ ನಟ ಕ್ವಾಟ್ಲೆ ಸತೀಶ್‌ನ ಹಲವಾರು ಮುಖಗಳು, ಪಟ್ಟ ಕಷ್ಟಗಳು ಅಕುಲ್ ಬಾಲಾಜಿ ನಿರೂಪಣೆಯ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಅನಾವರಣವಾಗಿದೆ.

ಅಭಿನಯ ಚತುರ ನಟ ನೀನಾಸಂ ಸತೀಶ್ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯರಾದವರು. ತೆರೆ ಮೇಲೆ ಮಂಡ್ಯ ಭಾಷೆಯಲ್ಲಿ ಅವರು ಉದುರಿಸುವ ಪ್ರತಿಯೊಂದು ಡೈಲಾಗ್ ಸಹ ಪ್ರೇಕ್ಷಕರಿಗೆ ನಗು ತರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಲೂಸಿಯಾ ಚಿತ್ರದ ಮೂಲಕ ಅವರು ಮಾಡಿದ ಮೋಡಿ ಯಾರು ಮರೆಯಲು ಸಾಧ್ಯವಿಲ್ಲ.

ಇನ್ನೂ ಮಂಡ್ಯ ಜನತೆಗಂತೂ ಸತೀಶ್ ನೀನಾಸಂ ಎಂದರೇ ಬಲು ಅಚ್ಚು ಮೆಚ್ಚು. ಕ್ವಾಟ್ಲೆ ಸತೀಶ್ ರವರು ನಟನಾಗಿ ಹೊರಹೊಮ್ಮಿದ್ದು ಯಶ್ ಅಭಿನಯದ ’ಡ್ರಾಮಾ’ ಚಿತ್ರದ ಮೂಲಕ. ಅಂದಿನಿಂದ ಇಂದಿನವರೆಗೂ ಅವರು ಹಿಂದಿರಿಗಿದ ಮಾತೇ ಇಲ್ಲ. ಆ ಚಿತ್ರದ ನಂತರ ಅವರು ನಟಿಸಿದ ’ಲೂಸಿಯಾ’, ’ಲವ್ ಇನ್ ಮಂಡ್ಯ’, ಇತ್ತೀಚೆಗೆ ತೆರೆಕಂಡ ’ಬ್ಯೂಟಿಫುಲ್ ಮನಸ್ಸುಗಳು’ ಎಲ್ಲಾ ಚಿತ್ರಗಳು ಸಹ ಸಕ್ಸಸ್ ಆಗಿವೆ. ಅಲ್ಲದೇ ನಿರ್ಮಾಪಕರಾಗಿ ’ರಾಕೆಟ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಇಷ್ಟು ಯಶಸ್ಸು ಕಂಡಿರುವ ಸತೀಶ್ ನೀನಾಸಂ ಚಂದನವನಕ್ಕೆ ಕಾಲಿಡುವ ಮುನ್ನ ಏನ್ ಮಾಡ್ತಿದ್ರು ಎಂಬುದು ಯಾರಿಗೂ ತಿಳಿದಿಲ್ಲ.

ನಟ ಸತೀಶ್ ನೀನಾಸಂ ತಾವು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಯಾವ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಕಲರ್ಸ್ ಸೂಪರ್ ವಾಹಿನಿಯ ’ಸೂಪರ್ ಟಾಕ್ ಟೈಮ್’ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಲೂಸಿಯಾ’ ಚಿತ್ರಕ್ಕೂ ನಿಜ ಜೀವನಕ್ಕೂ ಹತ್ತಿರ ಎನ್ನುವ ಸತೀಶ್ ನೀನಾಸಂ ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನ ಯಶವಂತಪುರದಲ್ಲಿದ್ದ ಗೋಪಾಲ್ ಥಿಯೇಟರ್ ನಲ್ಲಿ ಬ್ಯಾಟರಿ ಬುಡುತ್ತಿದ್ದರಂತೆ. ಆ ಚಿತ್ರಮಂದಿರ ಈಗ ಮುಚ್ಚಿ ಹೋಗಿದೆ. ಈಗಲೂ ಸಹ ಹೋಗ್ತಾ-ಬರುತ್ತಾ ಅದನ್ನು ಸತೀಶ್ ನೋಡುತ್ತಿರುತ್ತಾರಂತೆ. ಅಲ್ಲದೆ ಅದೇ ಥಿಯೇಟರ್ ನಲ್ಲಿ ಪಾಪ್‌ಕಾರ್ನ್ ಮಾರುತ್ತಿದ್ದರಂತೆ. ಅವರ ರಿಯಲ್ ಲೈಫ್ ’ಲೂಸಿಯಾ’ ಚಿತ್ರದಲ್ಲಿನ ಅವರ ಪಾತ್ರವಾಗಿತ್ತಂತೆ.

ಹಾಗೂ ಯಶವಂತಪುರದ ಗೋಪಾಲ್ ಥಿಯೇಟರ್ ಪಕ್ಕದಲ್ಲಿಯೇ ಇದ್ದ ’ವೈ ಮುನಿಯಪ್ಪ’ ಮದುವೆ ಚೌಟ್ರಿಯಲ್ಲಿ ಫ್ಲವರ್ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದರಂತೆ.
ಥಿಯೇಟರ್ ಮತ್ತು ಮದುವೆ ಚೌಟ್ರಿ ಮಾತ್ರವಲ್ಲದೇ ಯಶವಂತಪುರ ಬಸ್ ಡಿಪೋದಲ್ಲಿ ಬಸ್‌ಗಳನ್ನ ಕ್ಲೀನ್ ಮಾಡುತ್ತಿದ್ದರಂತೆ. ೨೦೦೦ ಇಸವಿಯಲ್ಲಿ ಪ್ರತಿದಿನ ಬೆಳಿಗ್ಗೆ ಎದ್ದು ೧೦-೧೫ ಬಸ್ ಗಳಲ್ಲಿ ಕಸ ಹೊಡೆದು ಕ್ಲೀನ್ ಮಾಡುತ್ತಿದ್ದೆ ಎಂದು ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಸತೀಶ್ ನೀನಾಸಂ ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದುಬೇಕೆಂದ್ರೆ ನನ್ನದೊಂದು ಸೈಕಲ್ ಇತ್ತು. ಅದನ್ನ ಮಾರಿ ಕೆ.ಎಂ.ದೊಡ್ಡಿಯಿಂದ ಬಸ್ ಹತ್ತಿದೆ. ನೇರವಾಗಿ ಬೆಂಗಳೂರಿಗೆ ಬಂದೆ. ಅದೇ ಮೊದಲು ಬೆಂಗಳೂರು ನೋಡಿದ್ದು. ಆಮೇಲೆ ಎಲ್ಲಿಗೆ ಹೋಗಬೇಕು ಅಂತ ಗೊತ್ತಿರಲಿಲ್ಲ. ಯಾವುದೋ ಒಂದು ಬಸ್ ಹತ್ತಿದೆ. ಅವರು ಯಶವಂತಪುರಕ್ಕೆ ಟಿಕೆಟ್ ಕೊಟ್ಟರು ಮುಂದೆ ಏನು ಅನ್ನೋ ಪ್ಲಾನ್ ಇರಲಿಲ್ಲ. ಆಗ ೧೬ನೇ ವಯಸ್ಸು ನನಗೆ” ಎಂದು ನೆನೆಸಿಕೊಂಡರು ಸತೀಶ್ ನೀನಾಸಂ

“ಒಬ್ಬ ಕಲಾವಿದ ಆಗ್ತೀನಿ ಅಂತ ನಿರೀಕ್ಷೆ ಮಾಡಿರಲೇ ಇಲ್ಲ. ಇವತ್ತು ತುಂಬಾ ಸಂತೋಷವಾಗುತ್ತೆ. ಎಲ್ಲವೂ ಆಕಸ್ಮಿಕವಾಗಿ ಆಗಿದ್ದು. ನಾನು ಕೇವಲ ಅನ್ನ ಹುಡುಕಿಕೊಂಡು ಬಂದಿದ್ದು ಅಷ್ಟೆ. ಯಾವ ಫ್ಯಾಮಿಲಿಯ ಬ್ಯಾಗ್ರೌಂಡ್ ಇರಲಿಲ್ಲ. ಏನೋ ಸಾಧನೆ ಮಾಡಬೇಕು ಅಂದುಕೊಂಡು ಇಲ್ಲಿಗೆ ಬಂದವನಲ್ಲ. ಆದರೆ ಈಗ ಕಲಾವಿದನಾಗಿದ್ದೇನೆ ಎಂಬ ಸಂತಸ ಇದೆ ಎನ್ನುತ್ತಾರೆ ನೀನಾಸಂ…..

Leave a Comment