ಸೂತಕ ಮನೆಯಾದ ಅಮೆರಿಕಾ

ನ್ಯೂಯಾರ್ಕ್, ಏ. ೩- ಕೊರೊನಾ ವೈರಾಣು ಸೋಂಕಿಗೆ ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 1169 ಮಂದಿ ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 6095 ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದ ದೇಶಗಳನ್ನೇ ಹಿಂದಿಕ್ಕಿ ಮೊದಲ ಸ್ಥಾನದಲ್ಲಿರುವ ಅಮೆರಿಕಾದಲ್ಲಿ ಇದುವರೆಗೂ 2 ಲಕ್ಷದ 45333 ಸೋಂಕಿತರಿದ್ದು, ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಇದು ಅಮೆರಿಕಾವನ್ನು ಮತ್ತಷ್ಟು ಆಂತಕಕ್ಕೆ ಗುರಿ ಮಾಡಿದೆ.

ದಿನೇ ದಿನೇ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಒಂದೇ ವಾರದಲ್ಲಿ 66 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಇದು ಅಮೆರಿಕಾ ಇತಿಹಾಸದಲ್ಲಿ ಮೊದಲು ಎನ್ನಲಾಗಿದೆ.

ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಶ್ವೇತಭವನ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇದೇ ತಿಂಗಳ 30 ರವರೆಗೆ ಜನರು ಮನೆಯಿಂದ ಹೊರ ಬರದೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಅಗತ್ಯ ಮತ್ತು ಅನಿವಾರ್ಯ ಸಂದರ್ಭದಲ್ಲಿ ಮನೆಯಿಂದ ಹೊರ ಬಂದವರು ಮಾಸ್ಕ್‌ಗಳನ್ನು ಧರಿಸಬೇಕು. ಇಲ್ಲದಿದ್ದರೆ ಜನರು ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಾದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಅಮೆರಿಕಾ ಉಪಾಧ್ಯಕ್ಷ ಟೆನ್ಸ್ ಹೇಳಿದ್ದಾರೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಜನರು ಮನೆಯಲ್ಲೇ ಇರುವುದಕ್ಕೆ ಒತ್ತು ನೀಡಬೇಕು. ಗುಂಪು ಸೇರುವುದು ಅಥವಾ 10 ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ನಿಯಮವನ್ನು ಮೀರಿ ಗುಂಪು ಸೇರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Comment