ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿಗೆ ಮನವಿ

ಪಿರಿಯಾಪಟ್ಟಣ: ಆ.13- ನೆರೆ ಹಾವಳಿಯಿಂದ ತತ್ತರಿಸಿರುವ ತಾಲೂಕಿನ ಗಡಿಭಾಗದ ಕಾವೇರಿ ನದಿ ತೀರದ ಪ್ರದೇಶಗಳಿಗೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎಚ್.ಸಿ ಬಸವರಾಜು ಭೇಟಿ ನೀಡಿ ನಷ್ಟ ಉಂಟಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವಂತೆ ಪಕ್ಷದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ನೆರೆ ಹಾವಳಿಯಿಂದ ತುತ್ತಾಗಿರುವ ತಾಲೂಕಿನ ಗಡಿಭಾಗದ ಗ್ರಾಮಗಳಾದ ಶಾನುಭೋಗನಹಳ್ಳಿ, ದೊಡ್ಡಕಮರವಳ್ಳಿ ,ಚಿಕ್ಕಕಮರವಳ್ಳಿ, ದಿಂಡಗಾಡು, ಮರಟಿಕೊಪ್ಪಲು, ಸೂಳೆಕೋಟೆ, ಹೊನ್ನಾಪುರ, ಚಾಮರಾಯನಕೋಟೆ, ಕಣಗಾಲು ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು, ಮಳೆ ಹೆಚ್ಚಳದಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಅದರ ವ್ಯಾಪ್ತಿಯಲ್ಲಿನ ತಾಲೂಕಿನ ಗಡಿ ಭಾಗದ ಗ್ರಾಮಗಳಿಗೆ ನೀರು ನುಗ್ಗಿರುವುದರಿಂದ ರೈತರು ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ ಮತ್ತು ಕೆಲವರ ವಾಸದ ಮನೆ, ಕೊಟ್ಟಿಗೆ, ತಂಬಾಕು ಹದ ಮಾಡುವ ಬ್ಯಾರನ್ ಗಳ ಗೋಡೆಗಳು ಕುಸಿದು ಜನರು ಸಂತ್ರಸ್ತರಾಗಿದ್ದಾರೆ, ಕಳೆದ ವರ್ಷ ಇದೇ ಸಮಯದಲ್ಲಿ ಸಹ ನೆರೆ ಪ್ರವಾಹದಿಂದ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿತ್ತು, ಸರ್ಕಾರದಿಂದ ಸಿಗುವ ಸವಲತ್ತು ಪೂರ್ಣ ಪ್ರಮಾಣದಲ್ಲಿ ದೊರೆಯದ ಕಾರಣ ಹಲವರ ಬದುಕು ದುಸ್ಥಿತಿ ತಲುಪಿತ್ತು ಮತ್ತು ವಾಣಿಜ್ಯ ಬೆಳೆಗಳಾದ ತಂಬಾಕು ಹಾಗೂ ಶುಂಠಿ ಬೆಳೆಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯದ ಕಾರಣ ರೈತರು ಕಂಗಾಲಾಗಿದ್ದರು.
ತಾಲೂಕಿನ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ವತಿಯಿಂದ ನಷ್ಟದ ಅಂದಾಜು ತಯಾರಿಸಿ ತಾಲೂಕು ದಂಡಾಧಿಕಾರಿಗಳ ಜೊತೆ ಚರ್ಚಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಭೇಟಿ ಮಾಡಿ ನಷ್ಟದ ಪರಿಹಾರ ಕೊಡಿಸಿಕೊಡುವಂತೆ ಮನವಿ ಸಲ್ಲಿಸಲಾಗುವುದು ಎಂದರು, ಮುಂದಿನ ದಿನಗಳಲ್ಲಾದರೂ ನೆರೆ ಪ್ರವಾಹ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಹೇಳಿದರು.
ಪರಿಹಾರ ಕೇಂದ್ರಕ್ಕೆ ಭೇಟಿ: ಇದೇ ವೇಳೆ ತಾಲೂಕು ಆಡಳಿತ ವತಿಯಿಂದ ಕೊಪ್ಪ ಸರ್ಕಾರಿ ಶಾಲೆಯಲ್ಲಿ ನೆರೆ ಸಂತ್ರಸ್ತರಿಗೆ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಕೈಗೊಂಡಿರುವ ಪರಿಹಾರ ಕಾರ್ಯಗಳನ್ನು ವೀಕ್ಷಿಸಿ ಸಾಂತ್ವನ ಹೇಳಿ ಕೂಡಲೇ ಪೂರ್ಣ ಪ್ರಮಾಣದ ಪರಿಹಾರ ಕೈಗೊಳ್ಳುವಂತೆ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಹಾಗೂ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭ ರೈತ ಮುಖಂಡರುಗಳಾದ ಶಾನುಭೋಗನಹಳ್ಳಿ ಲಕ್ಷ್ಮಿನಾರಾಯಣ್, ಕುಂದನಹಳ್ಳಿ ನಾಗೇಶ್, ಮಲ್ಲೆಸೋಮಾಚಾರ್, ಮಂಜುನಾಥ್, ಯಶೋಧಾನಂದ, ವಾಸುದೇವಪ್ಪ, ಗುರುಮಲ್ಲಪ್ಪ, ಸುರೇಶ್, ಪ್ರಕಾಶ್, ಶಿವಪುತ್ರ ಹಾಜರಿದ್ದರು.

Leave a Comment