ಸುಸ್ಥಿರ ಶಿಕ್ಷಣ ಸ್ಪರ್ಧೆಯ ರಾಷ್ಟ್ರ ಪ್ರಶಸ್ತಿ ಪ್ರದಾನ

ತುಮಕೂರು, ಫೆ. ೧೭- ವಿದ್ಯಾರ್ಥಿಗಳಲ್ಲಿ ಸುಸ್ಥಿರ  ಪರಿಸರ ಜಾಗೃತಿಯನ್ನು ಪ್ರೇರೇಪಿಸಲು ಹಾಗೂ ಜನರಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಂಗತಿಗಳ ಪರಿಚಯ ಮಾಡಿಕೊಡಲು ವಿಪ್ರೊ ಅರ್ಥಿಯನ್ ಸಂಸ್ಥೆಯು ಶಾಲಾ –ಕಾಲೇಜುಗಳಲ್ಲಿ ಸುಸ್ಥಿರ ಶಿಕ್ಷಣ ಎಂಬ ಶೀರ್ಷಿಕೆಯಡಿಯಲ್ಲಿ ಶಾಲಾ ಮಕ್ಕಳಿಗೆ ಜೀವ ವೈವಿಧ್ಯತೆ ಮತ್ತು ನೀರಿನ ಸುಸ್ಥಿರ ಅಭಿವೃದ್ಧಿ ಅಧ್ಯಯನದ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಒಬ್ಬ ಶಿಕ್ಷಕರ ಮಾರ್ಗದರ್ಶನದಲ್ಲಿ 2 ರಿಂದ 6 ವಿದ್ಯಾರ್ಥಿಗಳ ತಂಡವು ಸುಮಾರು ಮೂರು ತಿಂಗಳ ಕಾಲ ತಮ್ಮ ಶಾಲೆ ಅಥವಾ ಬಡವಾಣೆಯ ಸುತ್ತಮುತ್ತಲ ಜನರನ್ನು ಕಾಡುವ ನೀರಿನ ಸಮಸ್ಯೆ ಹಾಗೂ ಜೀವಿ ವೈವಿಧ್ಯದ ಪರಿಸ್ಥಿತಿ, ಪರಿಹಾರ ಮಾರ್ಗಗಳ ಬಗ್ಗೆ ಅಧ್ಯಯನ ಮಾಡಿ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿ ಪ್ರಬಂಧವನ್ನು ಸಲ್ಲಿಸಬೇಕು.

ಈ ನಿಟ್ಟಿನಲ್ಲಿ ತುಮಕೂರು ನಗರದ, ಸಿದ್ದರಾಮೇಶ್ವರ ಬಡಾವಣೆಯಲ್ಲಿರುವ ಶ್ರೀ ಗುರುಕುಲ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅದಿತಿ, ಭಾರ್ಗವ್ ಅಯ್ಯರ್, ಚಿರಾಗ್ ಜೈನ್.ಆರ್.ಎನ್, ರಾಹುಲ್‍ಎಂ.ಬೆಳಗುಲಿ, ರೋಹನ್.ಎನ್, ಹಾಗೂ ವೈಷ್ಣವಿ ರವರುಗಳು ವಿಜ್ಞಾನ ಶಿಕ್ಷಕಿಯಾದ ವೈ.ಟಿ. ರೂಪ ರವರ ಮಾರ್ಗದರ್ಶನದಲ್ಲಿ ನಗರದ ಜೀವ ವೈವಿಧ್ಯತೆ  ಹಾಗೂ ಸುಸ್ಥಿರತೆಯ ಬಗ್ಗೆ ಮೂರು ತಿಂಗಳ ಕಾಲ ಅಧ್ಯಯನ ಮಾಡಿ ಪ್ರಬಂಧವನ್ನು ವಿಪ್ರೋ ಅರ್ಥಿಯನ್ ಸಂಸ್ಥೆಗೆ ಸಲ್ಲಿಸಿದ್ದರು.

ಈ ವಿದ್ಯಾರ್ಥಿಗಳಿಗೆ ಸಿ.ಪಿ.ಆರ್. ಪರಿಸರ ಶಿಕ್ಷಣ ಕೇಂದ್ರ, ಬೆಂಗಳೂರು ಹಾಗೂ ತುಮಕೂರಿನ ಟ್ಯಾಕಲ್ ಸಂಸ್ಥೆಯು ಸಲಹೆ ಮತ್ತು ಸಹಕಾರವನ್ನು ನೀಡಿತ್ತು.

ಈ ಪ್ರಬಂಧವು 2016ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಹತ್ತು ಅತ್ಯುತ್ತಮ ಪ್ರಬಂಧಗಳಲ್ಲಿ ಒಂದಾಗಿ ಶ್ರೀ ಗುರುಕುಲ್ ಶಾಲೆಯ ಪ್ರಬಂಧವು ಆಯ್ಕೆಯಾಗಿದೆ. ಶಾಲೆಗೆ ಬಹುಮಾನ ರೂಪವಾಗಿ ಒಂದು ಲಕ್ಷ ರೂ.ಗಳನ್ನು ವಿಪ್ರೊ ಅರ್ಥಿಯನ್ ಸಂಸ್ಥೆಯವರು ಕಳೆದ ವಾರ ಬೆಂಗಳೂರಿನಲ್ಲಿ ವಿಪ್ರೋ ಸಂಸ್ಥೆಯ ಮುಖ್ಯಸ್ಥರಾದ ಅಜೀಮ್ ಪ್ರೇಮ್‍ಜೀ ಹಾಗೂ ಅನುರಾಗ್ ಕಶ್ಯಪ್‍ರವರು ನೀಡಿರುತ್ತಾರೆ.

ಈ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯನ್ನು ಶಾಲಾ ಆಡಳಿತ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಮಧುಜೈನ್‍ರವರು ಅಭಿನಂದಿಸಿದ್ದಾರೆ.

Leave a Comment