ಸುಸ್ಥಿರ ಕೃಷಿಗಾಗಿ ಸಾವಿರದ ಓಟ ಲಕ್ಷ್ಮಣ ಪ್ರಥಮ ಬಿಂಗಿ ದ್ವಿತೀಯ ಭಾನುಪ್ರಕಾಶ್ ತೃತೀಯ

ಬಳ್ಳಾರಿ, ಜ.5: ನಗರದಲ್ಲಿ ಸುಕೋ ಬ್ಯಾಂಕ್ ತನ್ನ ರಜತ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಸುಸ್ಥಿರ ಕೃಷಿಗಾಗಿ ಸಾವಿರದ ಓಟ ಸ್ಫರ್ಧೆಯಲ್ಲಿ ಬೆಂಗಳೂರಿನ ಲಕ್ಷ್ಮಣ 14 ನಿಮಿಷ 23 ಸೆಕೆಂಡ್‍ಗಳಲ್ಲಿ ಗುರು ತಲುಪಿ ಮೊದಲ ಸ್ಥಾನದಲ್ಲಿ ವಿಜಯ ಸಾಧಿಸಿ 25 ಸಾವಿರ ರೂಪಾಯಿಗಳ ಬಹುಮಾನವನ್ನು ಗಳಿಸಿದರು.

ಗದಗ್‍ನ ಮಹಾಂತೇಶ್ ಬಿಂಗಿ ಲಕ್ಷ್ಮಣನಿಗೆ ಪೈಪೋಟಿ ನೀಡಿ ಓಡಿದರಾದರೂ ಅವರು ಗುರಿ ತಲುಪಿದ್ದು 14 ನಿಮಿಷ 25 ಸೆಕೆಂಡ್‍ಗೆ ಇದರಿಂದಾಗಿ ಅವರು ಎರಡನೇ ಸ್ಥಾನ ಪಡೆದು 15 ಸಾವಿರ ನಗದು ಬಹುಮಾನವನ್ನು ಗೆದ್ದುಕೊಂಡರು. ಇನ್ನು ಬೆಂಗಳೂರಿನ ಭಾನುಪ್ರಕಾಶ್ 14 ನಿಮಿಷ 26 ಸೆಕೆಂಡ್‍ಗೆ ಓಡಿ ಮೂರನೇ ಸ್ಥಾನ ಪಡೆದು 10 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡರು.

ಮಹಿಳೆಯರ ವಿಭಾಗದಲ್ಲಿ ದಾವಣಗೆರೆಯ ಎ.ಅಕ್ಷತಾ 17 ನಿಮಿಷ 37 ಸೆಕೆಂಡ್‍ಗೆ ಮೊದಲು ಗುರಿ ಮುಟ್ಟಿದರೆ, ಬಳ್ಳಾರಿಯ ಎಸ್.ಕಾವ್ಯ 20 ನಿಮಿಷ25 ಸೆಕೆಂಡ್‍ಗೆ ಎರಡನೇ ಹಾಗೂ ವಿ.ಸುದೀಕ್ಷಾ 20 ನಿಮಿಷ 27 ಸೆಕೆಂಡ್‍ಗೆ ಮೂರನೇ ಸ್ಥಾನ ಪಡೆದರು.

ನಗರದ ದುರ್ಗಮ್ಮ ದೇವಸ್ಥಾನದಿಂದ ಈ ಓಟಕ್ಕೆ, ಪ್ರಸಕ್ತ ಸಾಲಿನಲ್ಲಿ ಸುಕೋ ಬ್ಯಾಂಕ್ ಕೃಷಿ ಸಾಧಕ ಪ್ರಶಸ್ತಿಗೆ ಆಯ್ಕೆ ಯಾಗಿರುವ ಅಜ್ಜಪ್ಪ ಕುಲುಗೋಡು ಮತ್ತು ಧರ್ಮರೆಡ್ಡಿ ಲಕ್ಕಣ್ಣನವರ್ ಚಾಲನೆ ನೀಡಿದರು.

ಅಲ್ಲಿಂದ ಆರಂಭವಾದ ಓಟ ಗಡಿಗಿ ಚೆನ್ನಪ್ಪ ವೃತ್ತ, ರೈಲು ನಿಲ್ದಾಣ ರಸ್ತೆ, ಎಚ್.ಆರ್.ಗವಿಯಪ್ಪ, ಅಂಬೇಡ್ಕರ್, ಎಸ್ಪಿ ಸರ್ಕಲ್ ಮೂಲಕ ಮತ್ತೆ ದುರ್ಗಮ್ಮ ದೇವಸ್ಥಾನಕ್ಕೆ ಕೊನೆಗೊಂಡಿತು.

ಜಿಲ್ಲಾ ಅಥ್ಲೆಟಿಕ್ಸ್ ತರಬೇತುದಾರ ಕೆ.ಎನ್.ರಾಮಸ್ವಾಮಿ, ವಿದ್ಯಾನಗರ ಕ್ರೀಡಾ ವಸತಿ ಶಾಲೆಯ ಅಥ್ಲೆಟಿಕ್ಸ್ ತರಬೇತುದಾರ ಅಶೋಕ್ ಮಂಟೂರ್ ತೀರ್ಪುಗಾರರಾಗಿದ್ದರು.

ನೀರಾ ವಿತರಣೆ: ಈ ಸಂಧರ್ಭದಲ್ಲಿ ಸ್ಪರ್ಧಿಗಳಿಗೆ ಮಲೆನಾಡು ರೈತ ಉತ್ಪಾದಕ ಕಂಪನಿ ತಯಾರಿಸಿದ ನೀರಾ ಪಾನೀಯವನ್ನು ವಿತರಿಸಿದ್ದು ವಿಶೇಷವಾಗಿತ್ತು. ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಮನೋಹರ್ ಮಸ್ಕಿ, ಅಧ್ಯಕ್ಷ ಮೋಹಿತ್ ಮಸ್ಕಿ, ಕಾರ್ಯನಿರ್ವಾಹಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಹೋತ್ರಿ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಶಿವಾನಂದ ಕಳವೆ ಮೊದಲಾದವರಿದ್ದರು.

ಪರಿಹಾರ ನಿಧಿಗೆ: ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಪಾವತಿಸಿದ ತಲಾ ಒಂದು ನೂರು ರೂಪಾಯಿಗಳ ನೋಂದಣಿ ಶುಲ್ಕವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಬ್ಯಾಂಕ್ ಪ್ರಕಟಿಸಿದೆ.

Leave a Comment