ಸುಸಜ್ಜಿತ ನ್ಯಾಯಮಂದಿರ ಲೋಕಾರ್ಪಣೆ

ಹುಬ್ಬಳ್ಳಿ,ಆ 12- ಏಷಿಯಾ ಖಂಡದಲ್ಲಿಯೇ ಪ್ರಪ್ರಥಮ ಸುಸಜ್ಜಿತ ಹವಾನಿಯಂತ್ರಿತ ನ್ಯಾಯಾಲಯಗಳ ಸಂಕೀರ್ಣ ಕಟ್ಟಡ ಇಂದು ಲೋಕಾರ್ಪಣೆಗೊಂಡಿತು.
ನಗರದ ವಿದ್ಯಾನಗರದ ತಿಮ್ಮಸಾಗರ ರಸ್ತೆಯಲ್ಲಿ ಸುಮಾರು 122 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 7 ಅಂತಸ್ತಿನ ನ್ಯಾಯಮಂದಿರದ ಕಟ್ಟಡವನ್ನು ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ  ಅಬ್ದುಲ್ ನಜೀರ ಮೋಹನ ಶಾಂತನಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ,ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಇದಕ್ಕೂ ಮೊದಲು ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಆಗಮಿಸಿದ ಎಲ್ಲ ನ್ಯಾಯಮೂರ್ತಿಗಳಿಗೆ ಭಾರಿ ಪೊಲೀಸ್ ಬಿಗಿಭದ್ರತೆಯಲ್ಲಿ ಮಹಿಳಾ ವಕೀಲರು ಪೂರ್ಣಕುಂಭದೊಂದಿಗೆ ಸ್ವಾಗತ ನೀಡಿ ಉದ್ಘಾಟನಾ ಸ್ಥಳಕ್ಕೆ ಕರೆತಂದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಅವರು ಕಟ್ಟಡ ಕೆಲ ಭಾಗಗಳನ್ನು ವೀಕ್ಷಿಸಿದರು.
@10nc = ಕೈ ಗೈರು
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ನ್ಯಾಯಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಯಾವೊಬ್ಬ ಕಾಂಗ್ರೆಸ್ ಸಚಿವರಾಗಲಿ, ಶಾಸಕರಾಗಲಿ ಕೊನೆ ಪಕ್ಷ ಸ್ಥಳೀಯ ಮುಖಂಡರು, ಕಾರ್ಯಕರ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳದೇ ಇರುವುದು ಎದ್ದು ಕಾಣುತ್ತಿತ್ತು.
ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಕೃಷಿ ಸಚಿವ ಕೃಷ್ಣ ಭೈರೇಗೌಡ, ಸಮಾರಂಭ ನಡೆಯುವ ಸ್ಥಳದತ್ತ ಮುಖ ತೋರಲಿಲ್ಲ.
ಇನ್ನು ಸ್ಥಳೀಯ ಶಾಸಕರಾದ ಸಿ.ಎಸ್.ಶಿವಳ್ಳಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ ಕೂಡ ಸಮಾರಂಭಕ್ಕೆ ಆಗಮಿಸಲಿಲ್ಲ. ಇದಕ್ಕೆ ಕಾರಣವೆಂದರೆ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆಯಲ್ಲಿ ಈ ನ್ಯಾಯಾಲಯ ಕಟ್ಟಡಕ್ಕಾಗಿ ಹಣ ಮಂಜೂರು ಮಾಡಿತ್ತೇನ್ನಲಾಗಿದೆ.
ಆದರೆ ಶಿಷ್ಟಾಚಾರಕ್ಕೂ ಕಾಂಗ್ರೆಸ್ ಪಕ್ಷದ ಯಾವುದೇ ಸಚಿವರನ್ನಾಗಲಿ, ಶಾಸಕರನ್ನಾಗಲಿ ಉದ್ಘಾಟನಾ ಸಮಾರಂಭಕ್ಕೆ ಕರೆಯದೇ ಇರುವುದು ಕಾಂಗ್ರೆಸ್ಸಿನ ಮುನಿಸಿಗೆ ಕಾರಣವಾಗಿದೆ.
ಆ ಹಿನ್ನೆಲೆಯಲ್ಲಿ ಈ ಸಮಾರಂಭದಿಂದ ಕಾಂಗ್ರೆಸ್ ಸಂಪೂರ್ಣ ದೂರ ಉಳಿದಿದೆ ಎಂದು ತಿಳಿದು ಬಂದಿದೆ.

Leave a Comment