ಸುಸಜ್ಜಿತ ಕನ್ನಡ ಸಭಾ ಭವನ ನಿರ್ಮಾಣ

ಕಲಬುರಗಿ,ಸೆ.14-ಈ ಭಾಗದ ದಾಸ ಸಾಹಿತ್ಯ, ವಚನ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸಲು ಕಥೆ, ಕಾವ್ಯ ಮತ್ತು ಸಂಶೋಧನಾತ್ಮಕ ಕಮ್ಮಟಗಳನ್ನು ಏರ್ಪಡಿಸಿ ಸಾಹಿತ್ಯದ ಬಗ್ಗೆ ಯುವ ಜನರಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಕನ್ನಡಭವನದಲ್ಲಿ 200 ಆಸನಗಳುಳ್ಳ ಸುಸಜ್ಜಿತವಾದ ಕನ್ನಡ ಸಭಾ ಭವನ ನಿರ್ಮಾಣ ಮಾಡಲಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಭವನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ಲಕ್ಷ ರೂಪಾಯಿ ವೆಚ್ಚದ ಈ ಕನ್ನಡ ಸಭಾ ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು 7 ಲಕ್ಷ ರೂ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು 15 ಲಕ್ಷ ರೂ, ದಾನಿಗಳು 2 ಲಕ್ಷ ರೂ ನೀಡಿದ್ದು, ಇದುವರೆಗೆ 26 ಲಕ್ಷ ರೂಪಾಯಿ ವೆಚ್ಚಮಾಡಲಾಗಿದೆ ಎಂದು ತಿಳಿಸಿದರು.

ಸುಸಜ್ಜಿತವಾದ ಕನ್ನಡ ಸಭಾ ಭವನದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ 3 ಸಾವಿರ, ಸಾಹಿತ್ಯೇತರ ಚಟುವಟಿಕೆಗಳಿಗೆ 7 ಸಾವಿರ ಬಾಡಿಗೆ ನಿಗದಿ ಪಡಿಸಿಸಲು ನಿರ್ಧರಿಸಲಾಗಿದೆ. ದಾನಿಗಳ ನೆರವಿನಿಂದ ಕನ್ನಡ ಭವನದಲ್ಲಿ ಸಿ.ಸಿ.ಟಿ.ವಿ. ಅಳವಡಿಕೆ ಮಾಡಲಾಗಾವುದು ಎಂದು ಸಿಂಪಿ ತಿಳಿಸಿದರು.

ಧನಸಹಾಯಕ್ಕೆ ಮನವಿ

ಕನ್ನಡ ಸಭಾ ಭವನಕ್ಕೆ ಖುರ್ಚಿ, ಸುಸಜ್ಜಿತ ಮೈಕ್ ಸೆಟ್, ಸ್ಟೇಜ್ ಲೈಟ್ಸ್, ಪಿಯೋಪಿ, ಕಲರಿಂಗ್, ಎಲ್.ಇ.ಡಿ.ಬಲ್ಬ್ ಗಳು, ಕರ್ಟನ್, ಮ್ಯಾಟ್ಸ್ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ಇನ್ನೂ 4 ಲಕ್ಷ ರೂಪಾಯಿ ಅಗತ್ಯವಿದ್ದು, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬ ಸದಸ್ಯ ರೂ.500, ಒಬ್ಬ ಕನ್ನಡಿಗ ರೂ.100 ಧನಸಹಾಯ ನೀಡುವುದರ ಮೂಲಕ ಇನ್ನುಳಿದ ಕೆಲಸ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಸಿಂಪಿ  ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದಕ್ಕೆ ಸರಕಾರ ಯಾವುದೇ ಅನುದಾನ ನೀಡುವುದಿಲ್ಲ. ಸ್ಥಳೀಯ ಸಂಪನ್ಮೂಲಗಳಿಂದ ಪರಿಷತ್ತನ್ನು ಕಟ್ಟಿಬೆಳೆಸಬೇಕಾಗಿರುವುದರಿಂದ ಸಾಹಿತ್ಯಕ, ಸಾಂಸ್ಕೃತಿಕ ಕಳಕಳಿಯುಳ್ಳ, ಶಾಸಕರು, ಸಂಸದರು ತಮ್ಮ ತಮ್ಮ ಅನುದಾನದಲ್ಲಿ ಅನುದಾನ ನೀಡಿ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಪರೂತೆ, ಮಡಿವಾಳಪ್ಪ ನಾಗರಹಳ್ಳಿ, ಲಿಂಗರಾಜ ಸಿರಗಾಪೂರ, ಶಿವಾನಂದ ಕಶೆಟ್ಟಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನವೆಂಬರ್ ನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ ತಿಂಗಳಲ್ಲಿ ಕನ್ನಡ ಭವನದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಾರವಾಡ ನಂತರ ಕಲಬುರಗಿಯಲ್ಲಿ ನಡೆಸಬೇಕು, ಈ ಭಾಗದ ಹಿರಿಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸಿಂಪಿ ಆಗ್ರಹಿಸಿದರು.

Leave a Comment