ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ, ಆ.13: ಜಿಲ್ಲೆಯ ಕುರುಗೋಡಿನ ತಹಶೀಲ್ದಾರ್ ಎಂ.ಬಸವರಾಜ ಅವರು ಎಸ್ಟಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಇತರೇ ವರ್ಗದವರಿಗೆ ನೀಡಿರುವುದನ್ನು ಖಂಡಿಸಿ ಇಂದು ನಗರದ ಡಿ.ಸಿ.ಕಚೇರಿ ಮುಂದೆ ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹೋರಾಟ ಸಮಿತಿಗಳಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕುರುಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದ ದೊಡ್ಡಯ್ಯ ಎಂಬುವವರು ಜಂಗಮ ಜಾತಿಗೆ ಸೇರಿದವರಾಗಿದ್ದು, ಅವರಿಗೆ 2017 ನವೆಂಬರ್ 11ರಂದು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಿದೆ.

ಪರಿಶಿಷ್ಟ ಪಂಗಡದಲ್ಲೇ 51 ಸಮುದಾಯಗಳಿದ್ದು ಇದರಲ್ಲಿ ವಾಲ್ಮೀಕಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಶೇ.7.5ರಷ್ಟು ಮೀಸಲಾತಿ ನೀಡುತ್ತಿದ್ದರೂ ರಾಜ್ಯ ಸರ್ಕಾರ ಕಳೆದ 27 ವರ್ಷಗಳಿಂದ 7.5ರಷ್ಟು ಮೀಸಲಾತಿ ನೀಡುವಲ್ಲಿ ಮೀನಾ-ಮೇಷ ಮಾಡುತ್ತಿದೆ.

ಹೀಗಿರುವಾಗ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಇಂತಹ ತಹಶೀಲ್ದಾರರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕರ ಸಂಘದ ರುದ್ರಪ್ಪ ಮಹರ್ಷಿ ವಾಲ್ಮೀಕಿ ಯುವಕ ಘರ್ಜನೆ ಸೇನೆ, ಎನ್.ಸತ್ಯನಾರಾಯಣ, ರಾಜ್ಯ ವಾಲ್ಮೀಕಿ ನಾಯಕರ ಜಾಗೃತಿ ವೇದಿಕೆ ವಿಜಯಕುಮಾರ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ದೊಡ್ಡ ಎಱ್ರಿಸ್ವಾಮಿ, ಸಿಂಧೂರ ಲಕ್ಷ್ಮಣ ಯುವಕರ ಸಂಘದ ಬಿ.ರಮಾಕೃಷ್ಣ, ಬಿ.ಲೋಕರೆಡ್ಡಿ, ರಾಜ್ಯ ವಾಲ್ಮೀಕಿ ನಾಯಕರ ಜಾಗೃತಿ ವೇದಿಕೆಯ ವಾಲ್ಮೀಕಿ ರಕ್ಷಣಾ ವೇದಿಕೆಯ ವಿ.ಕೆ.ಬಸಪ್ಪ, ರಾಜ್ಯ ನಾಯಕರ ಯುವ ಸೇನೆಯ ಗಡ್ಡಂ ತಿಮ್ಮಪ್ಪ, ಹಾಗೂ ಪಿ.ಬಾಲರಾಜು, ಮಲ್ಲಯ್ಯ, ಎಱ್ರೆಪ್ಪ, ಜಯರಾಂ, ಮಲ್ಲಿಕಾರ್ಜುನ, ವೈ.ದುರ್ವಾಸ, ಟಿ.ರಘು ಮತ್ತಿತರರಿದ್ದರು.

Leave a Comment