ಸುಮಲತಾ ಸ್ವಾಭಿಮಾನಿ ಸಮಾವೇಶ ಕೈ, ಬಿಜೆಪಿ ಬಾವುಟ ಪ್ರದರ್ಶನ ಹಾರಾಟ

ಮಂಡ್ಯ, ಏ. ೧೬- ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ದೋಸ್ತಿ ಅಭ್ಯರ್ಥಿ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ತೀವ್ರ ಪೈಪೋಟಿ ನಡೆಸಿದ್ದಾರೆ.
ಮಂಡ್ಯದಲ್ಲಿಂದು ಸುಮಲತಾ ಅಂಬರೀಶ್ ನಡೆಸಿದ ‘ಸ್ವಾಭಿಮಾನಿ ಶಕ್ತಿ ಪ್ರದರ್ಶನ’ಕ್ಕೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗಿರುವುದು ಸಹಜವಾಗಿಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನಿದ್ರೆಗೆಡಿಸುವಂತೆ ಮಾಡಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಪುತ್ರ ನಿಖಿಲ್ ಪರವಾಗಿ ಮಂಡ್ಯ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿ, ಕೊನೆಗಳಿಗೆಯ ಕಸರತ್ತು ನಡೆಸಿದರು.
ಮಂಡ್ಯದಲ್ಲಿ ಸುಮಲತಾ ನಡೆಸಿದ ಸ್ವಾಭಿಮಾನಿ ಸಮಾವೇಶದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಬಾವುಟಗಳು ರಾರಾಜಿಸಿದವು.
ಕಾಳಿಕಾಂಬ ದೇಗುಲದಿಂದ ಆರಂಭವಾದ ರೋಡ್ ಶೋ ಸಿಲ್ವರ್ ಜುಬಿಲಿ ಪಾರ್ಕ್‌ವರೆಗೂ ಸಾಗಿದ ವೇಳೆ ಸಹಸ್ರಾರು ಜನರು ಸೇರಿ, ಸುಮಲತಾ ಅವರಿಗೆ ಜೈಕಾರ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತ್ತು. ಮತ್ತೊಂದೆಡೆ ಕಳೆದ 15 ದಿನಗಳಿಂದ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ಚಿತ್ರನಟರಾದ ದರ್ಶನ್, ಯಶ್, ಸ್ವಾಭಿಮಾನಿ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಮತ್ತಷ್ಟು ಅಭಿಮಾನಿಗಳಲ್ಲಿ ಹುರುಪು ಮತ್ತು ಉತ್ಸಾಹವನ್ನು ಹೆಚ್ಚುಮಾಡಿದ್ದಾರೆ.
ಕಾಳಿಕಾಂಬ ದೇಗುಲದಿಂದ ಸಮಾವೇಶ ನಡೆಯುವ ಜಾಗದವರೆಗೂ ಜನಜಾತ್ರೆ ನೆರೆದಿತ್ತು. ಇದು ಸಹಜವಾಗಿ ಜೆಡಿಎಸ್ ನಾಯಕರನ್ನು ಕಂಗೆಡಿಸುವಂತೆ ಮಾಡಿತು.
ಇದುವರೆಗೂ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದ ದರ್ಶನ್ ಮತ್ತು ಯಶ್ ಇಂದು ಜೊತೆಯಾಗಿ ಸುಮಲತಾ ಅವರೊಂದಿಗೆ ಪ್ರಚಾರಕ್ಕೆ ಇಳಿಯುತ್ತಿದ್ದಂತೆ, ರೈತ ಸಂಘದ ಹಸಿರು ಶಾಲುಗಳು, ಮೂರು ಪಕ್ಷಗಳ ಬಾವುಟಗಳು ಹಾಗೂ ಅಂಬರೀಶ್ ಅಭಿಮಾನಿ ಸಂಘಗಳ ಅದ್ದೂರಿ ಸ್ವಾಗತ ಮತ್ತು ಬೆಂಬಲ ವ್ಯಕ್ತವಾಗಿದೆ.
ನಾಮಪತ್ರ ಸಲ್ಲಿಸುವ ದಿನ ಸುಮಲತಾ ಅವರಿಗೆ ಸಿಕ್ಕ ಬೆಂಬಲಕ್ಕಿಂತ ಹೆಚ್ಚಾಗಿ ಇಂದು ನಡೆಸಿದ ಸ್ವಾಭಿಮಾನಿ ಸಮಾವೇಶಕ್ಕೆ ಮಂಡ್ಯದ ಜನ ಸಾಥ್ ನೀಡಿದ್ದಾರೆ.
ದೇಗುಲದಲ್ಲಿ ಪೂಜೆ
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯದ ಕಾಳಿಕಾಂಬ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಸ್ವಾಭಿಮಾನಿ ಸಮಾವೇಶ ಆರಂಭಿಸಿದರು. ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಸೇರಿದಂತೆ, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಸುಮಲತಾ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ್ದು, ಮಂಡ್ಯ ಜನರ ಸ್ವಾಭಿಮಾನಕ್ಕಾಗಿ ಮತ ಚಲಾಯಿಸಿ ಎಂದು ಮಂಡ್ಯ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ಱ್ಯಾಲಿಯ ಹಿನ್ನೆಲೆಯಲ್ಲಿ ಸುಮಲತಾ ಅವರಿಗೆ ವ್ಯಾಪಕ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು.

Leave a Comment