ಸುಮಲತಾ ವಿರುದ್ದ ಕಾಂಗ್ರೆಸ್ ಮುಖಂಡರ ಆಕ್ರೋಶ

ಮಂಡ್ಯ. ಅ.10: ಸುಮಲತಾ ಅಂಬರೀಶ್ ನಡೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ ಮುಂದುವರೆದಿದ್ದು, ಸ್ವಾಭಿಮಾನದ ಹೆಸರಲ್ಲಿ ಮಂಡ್ಯ ಸಂಸದೆಯಾದ ಸುಮಲತಾ ಅವರ ನಡೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಕಿಡಿಕಾರಿದ್ದಾರೆ.
ಸುಮಲತಾ ಅವರಿಗೆ ಗೆಲ್ಲುವ ಮೊದಲು ಕಾಂಗ್ರೆಸ್ ಕಚೇರಿ ಗೊತ್ತಿತ್ತು. ಆಗ ಕಚೇರಿಗೆ ಬಂದು ಕಾರ್ಯಕರ್ತರಲ್ಲಿ ಸೆರಗೊಡ್ಡಿ ಮತ ಭಿಕ್ಷೆ ಬೇಡಿಕೊಳ್ಳುವಾಗ ಗೊತ್ತಿತ್ತು. ಈಗ ಕಾಂಗ್ರೆಸ್ ಕಚೇರಿ ಮರೆತಿದ್ದಾರೆ. ಬಿಜೆಪಿ ಕಚೇರಿ ನೆನಪಿಗೆ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆ ಬಿಜೆಪಿ ಕಚೇರಿಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು.
ಅವರು ಏನೆಂದು ಜಿಲ್ಲೆಯ ಜನ ತಿಳಿದುಕೊಳ್ಳಬೇಕಿದೆ. ಜಿಲ್ಲೆಯ ಜನ ಮುಠ್ಠಾಳರಲ್ಲ ಎನ್ನುತ್ತಿದ್ದ ಸುಮಲತಾ ಅವರೇ ಜನರನ್ನ ಮುಠ್ಠಾಳರನ್ನಾಗಿ‌ ಮಾಡಲು ಹೊರಟಿದ್ದಾರಾ? ಅದು ಸಾಧ್ಯವಿಲ್ಲ. ಜಿಲ್ಲೆಯ ಜನ ಮುಂದೆ ನಿಮಗೆ ಉತ್ತರ ಕೊಡುತ್ತಾರೆ. ಅಧಿಕಾರಕ್ಕಾಗಿ ಜನ ಹೀಗೆ ಬದಲಾಗುತ್ತಾರೆ ಅಂದರೆ ಮಾತನಾಡಲು ಅಸಹ್ಯವಾಗುತ್ತದೆ. ಜಿಲ್ಲೆಯ ಜನ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅವರನ್ನು ಗೆಲ್ಲಿಸಿದ್ದಾರೆ. ಇಲ್ಲಿ ಹೇಳಲು ಹೆಸರಿಲ್ಲದ ಬಿಜೆಪಿ ಕಚೇರಿಗೆ ಹೋಗಿ ಕೃತಜ್ಞತೆ ಸಲ್ಲಿಸ್ತಾರೆ ಅಂದರೆ, ಜನ ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಾರೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಕಣಕ್ಕೆ ಇಳಿದಾಗ ಬಿಜೆಪಿ ನಾಯಕರು ಸ್ವಾಭಿಮಾನದ ಹೆಸರಿನಲ್ಲಿ ಅವರ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ ಮಂಡ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದ ಅವರು, ಚುನಾವಣೆ ಮುಗಿದ ಬಳಿಕ ಅವರು ಬಿಜೆಪಿಗೆ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಆದರೆ, ಸುಮಲತಾ ಚುನಾವಣಾ ಮುಗಿದ ಬಳಿಕವೂ ಯಾವುದೇ ಪಕ್ಷ ಸೇರದೇ ದೂರ ಉಳಿದಿದ್ದರು. ಆದರೆ, ಬಿಎಸ್ ಯಡಿಯೂರಪ್ಪ ಸರ್ಕಾರ ಹಾಗೂ ಮೋದಿ ಸರ್ಕಾರದ ಕಾರ್ಯಗಳಿಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದರು.
ಸುಮಲತಾ ಗೆಲುವಿಗೆ ಬಿಜೆಪಿಯ ಪರೋಕ್ಷ ಬೆಂಬಲದ ಜೊತೆಗೆ ಕ್ಷೇತ್ರದಲ್ಲಿನ ಕೈ ಮುಖಂಡರ ಬೆಂಬಲ ಹೆಚ್ಚಿತು. ಈ ಹಿನ್ನೆಲೆಯಲ್ಲಿಯೇ ಅವರು ಯಾವುದೇ ಪಕ್ಷ ಸೇರದ ತಟಸ್ಥರಾಗಿ ಉಳಿದಿದ್ದರು.

Leave a Comment