ಸುಮಲತಾಗೆ ಬೆಂಬಲ ಚರ್ಚಿಸಿ ನಿರ್ಧಾರ-ಎಸ್‌ಎಂಕೆ

ಬೆಂಗಳೂರು, ಮಾ. ೧೫- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡುವ ಕುರಿತು ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭರವಸೆ ನೀಡಿದ್ದಾರೆ.
ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್‌ಎಂಕೆ ನಿವಾಸಕ್ಕೆ ತೆರಳಿದ ಸುಮಲತಾ ಅಂಬರೀಷ್, ಮಹತ್ವದ ಮಾತುಕತೆ ನಡೆಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಸುಮಲತಾ ಮಾಡಿದ ಮನವಿಗೆ ಸ್ಪಂದಿಸಿರುವ ಎಸ್.ಎಂ.ಕೆ, ಈ ತಿಂಗಳ 18 ರಂದು ಬಿಜೆಪಿ ಪಟ್ಟಿ ಪ್ರಕಟವಾಗಲಿದೆ. ಇದಕ್ಕೂ ಮುಂಚೆ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್, ಮಂಡ್ಯದಲ್ಲಿ ಬೆಂಬಲ ನೀಡುವಂತೆ ಎಸ್.ಎಂ ಕೃಷ್ಣ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಬೆಂಬಲ ನೀಡುವ ಸಂಬಂಧ ಬಿಜೆಪಿಯ ಯಾವುದೇ ನಾಯಕರನ್ನು ಇದುವರೆಗೂ ಭೇಟಿ ಮಾಡಿಲ್ಲ ಎಂದು ತಿಳಿಸಿದರು.

Leave a Comment